ಅಹ್ಮದಾಬಾದ್:ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ-ಆಸ್ಟ್ರೇಲಿಯಾ ನಡುವಣ ನಡೆದ ಏಕದಿನ ವಿಶ್ವಕಪ್ನ ಫೈನಲ್ ಪಂದ್ಯದಲ್ಲಿ 241 ರನ್ಗಳ ಟಾರ್ಗೆಟ್ ಅನ್ನು ಬೆನ್ನತ್ತಿದ ಆಸ್ಟ್ರೇಲಿಯಾ 43 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ಮುಟ್ಟುವ ಮೂಲಕ ಭರ್ಜರಿ ಜಯ ಸಾಧಿಸಿದೆ.
ಆಸ್ಟ್ರೇಲಿಯದ ಆರಂಭಿಕ ಬ್ಯಾಟ್ಸ್‌ಮನ್ ಟ್ರಾವಿಸ್ ಹೆಡ್ ಅತ್ಯಮೋಘ ಶತಕ ಸಿಡಿಸಿದರು. ವಿಶ್ವಕಪ್ ಫೈನಲ್ ನಲ್ಲಿ ಶತಕ ಸಿಡಿಸಿದ ಏಳನೇ ಬ್ಯಾಟರ್ ಎನಿಸಿಕೊಂಡರು. ಅವರು 95 ಎಸೆತಗಳಲ್ಲಿ ತಮ್ಮ ಶತಕವನ್ನು ಪೂರ್ಣಗೊಳಿಸಿದರು. ಸ್ಮರಣೀಯ ಆಟವಾಡಿದ ಹೆಡ್, ಕಪ್ ಗೆಲ್ಲಲು ಕೇವಲ ಎರಡೇ ರನ್ ಬಾಕಿ ಇದ್ದಾಗ 137 ರನ್ ಗಳಿಸಿದ್ದ ವೇಳೆ ಸಿರಾಜ್ ಎಸೆದ ಚೆಂಡನ್ನು ಗಿಲ್ ಕೈಗಿತ್ತು ನಿರ್ಗಮಿಸಿದರು. 120 ಎಸೆತಗಳಲ್ಲಿ ಅದ್ಭುತ ಇನ್ನಿಂಗ್ಸ್ ಕಟ್ಟಿದ ಹೆಡ್ 15 ಬೌಂಡರಿ ಮತ್ತು 4 ಭರ್ಜರಿ ಸಿಕ್ಸರ್ ಸಿಡಿಸಿದರು. ಲಬುಶೇನ್ ಔಟಾಗದೆ 58 ರನ್ ಗಳಿಸಿದರು.
ಗುರಿ ಬೆನ್ನಟ್ಟಿದ ಆಸೀಸ್ ಆರಂಭದಿಂದಲೇ ಅಬ್ಬರಿಸುತ್ತಾ ಸಾಗಿತು. ಆದರೆ 7 ರನ್ ಗಳಿಸಿದ್ದ ಡೇವಿಡ್ ವಾರ್ನರ್ ಅವರು ಶಮಿ ಎಸೆದ ಚೆಂಡನ್ನು ಕೊಹ್ಲಿ ಕೈಗಿತ್ತು ನಿರ್ಗಮಿಸಿದರು. ಇದು ಆರಂಭಿಕ ಆಘಾತವಾಯಿತು. 15 ರನ್ ಗಳಿಸಿದ್ದ ಮಿಚೆಲ್ ಮಾರ್ಷ್ ಬುಮ್ರಾ ಎಸೆದ ಚೆಂಡನ್ನು ರಾಹುಲ್ ಕೈಗಿತ್ತು ನಿರ್ಗಮಿಸಿದರು.ಆ ಬಳಿಕ ಸ್ಮಿತ್ ಎಲ್ಬಿಡಬ್ಲ್ಯೂ ಮೂಲಕ ಔಟಾಗಿದ್ದು ವಿಶ್ವಕಪ್ ಫೈನಲ್ ನಂತಹ ಮಹತ್ವದ ಪಂದ್ಯದಲ್ಲಿ ತೀವ್ರ ಚರ್ಚೆಗೆ ಗುರಿಯಾಗಿದೆ.
ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಭಾರತದ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿ ವಿಶ್ವಕಪ್ ಹೀರೋ ಎನಿಸಿಕೊಂಡರು. ನಾಲ್ಕನೇ ವಿಕೆಟ್ ಗೆ ಹೆಡ್ ಅವರಿಗೆ ಸಾಥ್ ನೀಡಿ ಅದ್ಭುತ ಜತೆಯಾಟವಾಡಿದ ಮಾರ್ನಸ್ ಲಬುಶೇನ್ ಅವರು ಗೆಲುವನ್ನು ಖಚಿತ ಪಡಿಸಿದರು.
ಆರಂಭದಲ್ಲಿ ನಾಯಕ ರೋಹಿತ್ ಶರ್ಮ ಅವರು ಅಬ್ಬರಿಸುತ್ತಿದ್ದ ವೇಳೆ ಶುಭಮಂ ಗಿಲ್ ಅವರು ತಂಡ 4.2 ಓವರ್ ಗಳಲ್ಲಿ 30 ರನ್ ಗಳಿಸಿದ್ದ ವೇಳೆ ಔಟಾಗಿ ಆಘಾತ ಅನುಭವಿಸಿತು. 4 ರನ್ ಗೆ ಗಿಲ್ ನಿರ್ಗಮಿಸಿದರು. ಆ ಬಳಿಕ ಶರ್ಮ 47 ರನ್ ಗಳಿಸಿ ವಿಶ್ವಾಸ ಮೂಡಿಸಿದ್ದ ವೇಳೆ ಆಘಾತಕಾರಿಯಾಗಿ ಔಟಾದರು. 4 ಬೌಂಡರಿ ಮತ್ತು 3 ಸಿಕ್ಸರ್ ಬಾರಿಸಿದ್ದರು. ಮ್ಯಾಕ್ಸ್‌ವೆಲ್ ಎಸೆದ ಚೆಂಡನ್ನು ರೋಹಿತ್ ದೊಡ್ಡ ಹೊಡೆತಕ್ಕೆ ಮುಂದಾದರು ಈ ವೇಳೆ ಹೆಡ್ ಅದ್ಬುತ ಕ್ಯಾಚ್ ಹಿಡಿದರು.
ಅದ್ಬುತ ಫಾರ್ಮ್ ನಲ್ಲಿದ್ದ ಶ್ರೇಯಸ್ ಅಯ್ಯರ್ 4 ರನ್ ಗೆ ಔಟಾಗಿ ನಿರಾಶರಾದರು. ಆಬಳಿಕ ತಾಳ್ಮೆಯ ಆಟವಾಡಿದ ಕೊಹ್ಲಿ 63 ಎಸೆತಗಳಲ್ಲಿ 54 ರನ್ ಗಳಿಸಿದ್ದ ವೇಳೆ ದುರದೃಷ್ಟವೆಂಬಂತೆ ಔಟಾದರು. ಅವರು 4 ಬೌಂಡರಿಗಳನ್ನು ಬಾರಿಸಿದ್ದರು. ನಾಯಕ ಕಮ್ಮಿನ್ಸ್ ಎಸೆದ ಚೆಂಡು ಕೊಹ್ಲಿ ಅವರ ಬ್ಯಾಟ್ ಗೆ ತಗುಲಿ ವಿಕೆಟ್ ಗೆ ಅಪ್ಪಳಿಸಿತು.
ತಾಳ್ಮೆಯ ಆಟವಾಡಿದ ಕೆಎಲ್ ರಾಹುಲ್ 107 ಎಸೆತಗಳಲ್ಲಿ 66 ರನ್ ಗಳಿಸಿ ಭರವಸೆ ಮೂಡಿಸಿದರು. ಆದರೆ ಸ್ಟಾರ್ಕ್ ಅವರು ಎಸೆದ ಚೆಂಡು ಕೀಪರ್ ಜೋಶ್ ಇಂಗ್ಲಿಸ್ ಅವರ ಕೈ ಸೇರಿ ನಿರ್ಗಮಿಸಿದರು. ರವೀಂದ್ರ ಜಡೇಜಾ ಕೂಡ ದೊಡ್ಡ ಮೊತ್ತ ದಾಖಲಿಸಲು ಸಾಧ್ಯವಾಗಲಿಲ್ಲ.22 ಎಸೆತಗಳಲ್ಲಿ 9 ರನ್ ಗಳಿಸಿ ಔಟಾದರು. ಶಮಿ 6 ರನ್ ಗಳಿಸಿ ಔಟಾದರು.
ಸೂರ್ಯಕುಮಾರ್ ಯಾದವ್ 28 ಎಸೆತಗಳಲ್ಲಿ 18 ರನ್ ಗಳಿಸಿ ಔಟಾದರು. ಬುಮ್ರಾ 1 ರನ್ ಗೆ ಔಟಾದರು. ಕೊನೆಯ ಎಸೆತದಲ್ಲಿ ಕುಲದೀಪ್ ಯಾದವ್ 10 ರನ್ ಗಳಿಸಿದ್ದ ವೇಳೆ ರನ್ ಔಟಾದರು. ಮತ್ತು ಸಿರಾಜ್ 8 ರನ್ ಗಳಿಸಿ ಔಟಾಗದೆ ಉಳಿದರು. ಆಸೀಸ್ ಬಿಗಿ ದಾಳಿಯ ನಡುವೆಯೂ 50 ಓವರ್ ಗಳಲ್ಲಿ 240 ರನ್ ಗಳಿಗೆ ಆಲೌಟಾಯಿತು.ಆಸೀಸ್ ಪರ ಬಿಗಿ ದಾಳಿ ಸಂಘಟಿಸಿದ ಮಿಚೆಲ್ ಸ್ಟಾರ್ಕ್3, ಜೋಶ್ ಹ್ಯಾಜಲ್ವುಡ್2 , ಗ್ಲೆನ್ ಮ್ಯಾಕ್ಸ್ವೆಲ್ 1, ಪ್ಯಾಟ್ ಕಮ್ಮಿನ್ಸ್2 , ಆಡಮ್ ಝಂಪಾ 1 ವಿಕೆಟ್ ಪಡೆದರು.