ಅಹಮದಾಬಾದ್: ಭಾರತದಲ್ಲಿ ಆರಂಭವಾಗುವುದು ವಿಶ್ವಕಪ್ ಕ್ರಿಕೆಟ್ ಅಲ್ಲ ಅದು ವಿಶ್ವ ಭಯೋತ್ಪಾದನಾ ಕಪ್ಎಂದು ಸಿಖ್ ಫಾರ್ ಜಸ್ಟಿಸ್ ಸಂಘಟನೆಯ ಮುಖ್ಯಸ್ಥ ಗುರುಪತ್ವಂತ್ ಸಿಂಗ್ ಪನ್ನುನ್ ಬೆದರಿಕೆ ಹಾಕಿದ್ದಾನೆ. ಈ ಬೆದರಿಕೆ ಹಿನ್ನೆಲೆಯಲ್ಲಿ ಆತನ ವಿರುದ್ಧ ಗುಜರಾತಿನ ಅಹಮದಾಬಾದ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ವಿಶ್ವಕಪ್ ಕ್ರಿಕೆಟ್ ಗುರಿಯಾಗಿಸಿಕೊಂಡು ಪನ್ನುನ್ ಆಡಿಯೋ ಸಂದೇಶ ಬಿಡುಗಡೆ ಮಾಡಿದ್ದಾನೆ. ಅಕ್ಟೋಬರ್ 5 ರಿಂದ ಭಾರತದಲ್ಲಿ ವಿಶ್ವಕಪ್ ಕ್ರಿಕೆಟ್ ಆರಂಭವಾಗಲಿದೆ. ಆದರೆ ಅಕ್ಟೋಬರ್ 5 ರಿಂದ ತನ್ನ ಸಂಸ್ಥೆಯು ವಿಶ್ವ ಭಯೋತ್ಪಾದಕ ಕಪ್ ಅನ್ನು ಪ್ರಾರಂಭಿಸಲಿದೆ ಎಂದು ಬೆದರಿಕೆ ಹಾಕಿದ್ದಾನೆ.
ಅಷ್ಟೇ ಅಲ್ಲದೇ ಆಡಿಯೋದಲ್ಲಿ ನಿಜ್ಜರ್ ಹತ್ಯೆಗೆ ಪ್ರತೀಕಾರವಾಗಿ ಅಹಮದಾಬಾದ್ ಸ್ಟೇಡಿಯಂ ಮೇಲೆ ದಾಳಿ ನಡೆಸಲಾಗುವುದು ಎಂದು ಹೇಳಿದ್ದಾನೆ. ಕಳೆದ ಕೆಲ ದಿನಗಳಿಂದ ದೇಶಾದ್ಯಂತ ಹಲವು ಜನರ ಮೊಬೈಲ್‌ಗಳಿಗೆ ಪನ್ನುನ್ ಹೆಸರಿನಲ್ಲಿ ವಿದೇಶಿ ಸಂಖ್ಯೆಯಿಂದ ಆಡಿಯೋ ಕರೆ ಬರುತ್ತಿರುವ ಹಿನ್ನೆಲೆಯಲ್ಲಿ ಈಗ ಎಫ್‌ಐಆರ್ ದಾಖಲಿಸಲಾಗಿದೆ.
ಸಿಖ್ಖರು ಮತ್ತು ದೇಶದ ಇತರ ಸಮುದಾಯಗಳ ನಡುವೆ ದ್ವೇಷವನ್ನು ಸೃಷ್ಟಿಸಲು ಮತ್ತು ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪನ್ನುನ್ ಪ್ರಯತ್ನಿಸುತ್ತಿದ್ದಾನೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖವಾಗಿದೆ.