ಬಂಟ್ವಾಳದಲ್ಲಿ ಸಿದ್ಧವಾಗಿದೆ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಪಿಂಕ್ ಟಾಯ್ಲೆಟ್

By: Ommnews

Date:

Share post:

ಬಂಟ್ವಾಳ : ಇದು ಮಹಿಳೆಯರಿಗಾಗಿಯೇ ಇರುವ ಸೌಲಭ್ಯ. ಹೆಸರು ಪಿಂಕ್ ಟಾಯ್ಲೆಟ್. ಜನನಿಬಿಡ ಪ್ರದೇಶ, ಮಾರುಕಟ್ಟೆ ಹಾಗೂ ಸಾರ್ವಜನಿಕರು ಹೆಚ್ಚಿನ ಪ್ರಮಾಣದಲ್ಲಿ ಸೇರುವ ಸ್ಥಳಗಳಲ್ಲಿ ನೈರ್ಮಲ್ಯ ಕಾಪಾಡುವ ಉದ್ದೇಶದಿಂದ ಗುಲಾಬಿ ಶೌಚಾಲಯಗಳನ್ನು ತೆರೆಯಲು ಕಳೆದ ವರ್ಷ ರಾಜ್ಯ ಸರಕಾರ ತೀರ್ಮಾನಿಸಿತ್ತು.

Advertisement
Advertisement
Advertisement

ಇದರ ಭಾಗವಾಗಿ ಮೈಸೂರಿನಲ್ಲಿ ಮೊದಲ ಪಿಂಕ್‌ ಟಾಯ್ಲೆಟ್ ನಿರ್ಮಾಣವಾಗಿತ್ತು. ಗುಲಾಬಿ ಶೌಚಾಲಯವೆಂದೇ ಹೇಳಲಾಗುವ ಪಿಂಕ್ ಟಾಯ್ಲೆಟ್ ಇದೀಗ ಬಂಟ್ವಾಳದಲ್ಲಿ ನಿರ್ಮಾಣಗೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಮೊದಲಿನದ್ದು ಎಂಬ ಹೆಗ್ಗಳಿಕೆ ಪಡೆದಿದೆ.

ಇದನ್ನು ಗಮನಿಸಿದ ಬಂಟ್ವಾಳ ಪುರಸಭಾ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ ಅವರು ಬಂಟ್ವಾಳದಲ್ಲೂ ಪಿಂಕ್ ಟಾಯ್ಲೆಟ್ ನಿರ್ಮಿಸುವ ಕುರಿತು ರೂಪುರೇಷೆ ಹಾಕಿದರು. ಹೀಗಾಗಿ ಬಂಟ್ವಾಳ ತಾಲೂಕು ಆಡಳಿತ ಸೌಧ (ಹಿಂದಿನ ಮಿನಿ ವಿಧಾನಸೌಧ)ದ ಗೇಟಿನ ಪಕ್ಕದಲ್ಲೇ ಫುಟ್ ಪಾತ್ ಇರುವ ಜಾಗದ ಸನಿಹದಲ್ಲಿ ಪಿಂಕ್ ಟಾಯ್ಲೆಟ್ ಈಗ ಕಾಣಿಸುತ್ತಿದೆ. ಬಂಟ್ವಾಳ ತಾಲೂಕಿನ ಕೇಂದ್ರಭಾಗವಾದ ಬಿ.ಸಿ.ರೋಡಿನ ಕೈಕುಂಜೆ ರಸ್ತೆಯಲ್ಲಿ ಆಡಳಿತ ಸೌಧದ ಪಕ್ಕ ನಿರ್ಮಿಸಲಾದ ಈ ಶೌಚಾಲಯ ಮಹಿಳೆಯರ ಬಳಕೆಗೆಂದೇ ಮೀಸಲಾಗಿದೆ. ಅಮೃತ ನಿರ್ಮಲ ನಗರ ಯೋಜನೆಯಲ್ಲಿ ಪಿಂಕ್ ಟಾಯ್ಲೆಟ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಇದು ಮೊದಲ ಪಿಂಕ್ ಟಾಯ್ಲೆಟ್.

ಬಂಟ್ವಾಳ ಪುರಸಭೆಗೆ ಅಮೃತ ನಿರ್ಮಲ ನಗರ ಯೋಜನೆಯ ಮೂಲಕ ಬಂಟ್ವಾಳ ಪುರಸಭೆಗೆ ಬಂದ 1 ಕೋಟಿ ರೂ ಅನುದಾನದಲ್ಲಿ 25.5 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಂಡಿದೆ.

ಏನೇನು ಇದರಲ್ಲಿದೆ?

ಬಿ.ಸಿ.ರೋಡಿನ ಕೈಕುಂಜೆ ರಸ್ತೆಯಲ್ಲಿರುವ ಈ ಪಿಂಕ್ ಟಾಯ್ಲೆಟ್ ಕೇವಲ ಶೌಚಾಲಯವಲ್ಲ. ಬಿ.ಸಿ.ರೋಡಿಗೆ ಹತ್ತಾರು ಕೆಲಸಗಳಿಗೆ ಆಗಮಿಸುವ ಮಹಿಳೆಯರಿಗೆ ಇದು ಅನುಕೂಲವೂ ಆಗಲಿದೆ. ಹಾಲುಣಿಸುವ ಮಕ್ಕಳಿರುವ ತಾಯಂದಿರು ಆಗಮಿಸಿದ ಸಂದರ್ಭ ಅವರಿಗೆ ಸರಿಯಾದ ಫೀಡಿಂಗ್ ಏರಿಯಾಗಳು ದೊರಕುವುದಿಲ್ಲ. ಸದ್ಯಕ್ಕೆ ಬಿ.ಸಿ.ರೋಡಿನ ಆಡಳಿತ ಸೌಧದಲ್ಲಿರುವ ಸಬ್ ರಿಜಿಸ್ಟ್ರಾರ್ ಕಚೇರಿ ಆವರಣದಲ್ಲಿ ಒಂದು ಫೀಡಿಂಗ್ ಏರಿಯಾ ಇದ್ದರೂ ಎಲ್ಲರಿಗೂ ಅಲ್ಲಿಗೆ ಹೋಗಲು ಅನಾನುಕೂಲ. ಪೇಟೆಗೆ ಪುಟ್ಟ ಮಗುವಿನೊಂದಿಗೆ ಕೋರ್ಟು, ಕಚೇರಿ, ಬ್ಯಾಂಕುಗಳಿಗೆ ಬಂದ ತಾಯಂದಿರಿಗೆ ಇಲ್ಲಿ ಹಾಲುಣಿಸುವುದಕ್ಕೆ ಪ್ರತ್ಯೇಕ ಜಾಗ ಮೀಸಲಾಗಿದೆ. ಅಲ್ಲದೆ, ಮಹಿಳೆಯರಿಗೆ ವಿಶ್ರಾಂತಿ ಕೊಠಡಿ, ಸ್ಯಾನಿಟರಿ ನ್ಯಾಪ್ ಕಿನ್ ವ್ಯವಸ್ಥೆಯೂ ಇದೆ. ಸುಸಜ್ಜಿತ ವ್ಯವಸ್ಥೆಯನ್ನು ಇದು ಒಳಗೊಂಡಿರುತ್ತದೆ. ದೂರದೂರಿನಿಂದ ಮಕ್ಕಳೊಂದಿಗೆ ಬರುವವರು ಇಲ್ಲಿ ಹಾಲುಣಿಸಬಹುದು. ಅಲ್ಲದೇ ಇಲ್ಲಿ ಸ್ಯಾನಿಟರಿ ಪ್ಯಾಡ್‌ಗಳನ್ನು ಇಡಲಾಗಿರುತ್ತದೆ. ಜೊತೆಗೆ ಬಟ್ಟೆ ಬದಲಾಯಿಸಿಕೊಳ್ಳಲು ಡ್ರೆಸ್ಸಿಂಗ್ ರೂಂ ಕೂಡ ಇರುತ್ತದೆ.

ಈಗಾಗಲೇ ನೋಯ್ಡಾ, ತಮಿಳುನಾಡು ಸೇರಿದಂತೆ ರಾಷ್ಟ್ರದ ವಿವಿಧ ರಾಜ್ಯಗಳಲ್ಲಿ ಈ ಯೋಜನೆ ಯಶಸ್ವಿಯಾಗಿವೆ. ಸದಾ ಜನದಟ್ಟಣೆ ಇರುವಂತಹ ಜಾಗ, ವಾಣಿಜ್ಯ ಸಂಕೀರ್ಣಗಳು, ಬಟ್ಟೆ, ಆಹಾರ, ಬೇಕರಿ, ಚಿನ್ನಾಭರಣ, ಬ್ಯಾಂಕ್, ಎಟಿಎಂ, ಶೂ, ಮೊಬೈಲ್ ಫೋನ್ ಸೇರಿದಂತೆ ಸಾಕಷ್ಟು ಅಂಗಡಿ-ಮಳಿಗೆಗಳು ಇರುವ ಜಾಗದಲ್ಲಿ ನಿತ್ಯ ಸಾವಿರಾರು ಜನ ಓಡಾಡುವಲ್ಲಿ ಇದು ಪ್ರಯೋಜನಕಾರಿ. ಮದುವೆ, ಮುಂಜಿಯಿಂದ ಹಿಡಿದು ನಾನಾ ಶುಭ ಸಮಾರಂಭಗಳಿಗೆ ಸಾರ್ವಜನಿಕರು ಪೇಟೆಗೆ ಆಗಮಿಸುತ್ತಾರೆ. ಹಾಗಾಗಿ‌ ಮಹಿಳೆಯರಿಗೆ ಅನುಕೂಲ ಆಗಲಿ ಎಂಬ ಉದ್ದೇಶದಿಂದ ಪಿಂಕ್ ಶೌಚಾಲಯ ನಿರ್ಮಿಸಲಾಗಿದೆ.

Share post:

LEAVE A REPLY

Please enter your comment!
Please enter your name here

ದೇಣಿಗೆ

Add an Introductory Description to make your audience curious by simply setting an Excerpt on this section