Byju’s : ರೂಪಾಯಿ ಸಾಲ ಮರುಪಾವತಿಗಾಗಿ 2 ಕಂಪನಿಗಳನ್ನೇ ಮಾರಾಟಕ್ಕಿಟ್ಟ ಬೈಜೂಸ್

0
114

ನವದೆಹಲಿ: ದೇಶದ ಅತೀ ದೊಡ್ಡ ಶಿಕ್ಷಣ ತಂತ್ರಜ್ಞಾನ ಸಂಸ್ಥೆಯಾದ ಬೈಜೂಸ್ (‌Byju’s) ಕಳೆದ ಕೆಲವು ತಿಂಗಳಿನಿಂದ ಸಾಲದ ಸುಳಿಯಲ್ಲಿ ಸಿಲುಕಿಕೊಂಡಿದ್ದು, ಇದೀಗ ಸಾಲದ ಹೊರೆಯನ್ನು ಇಳಿಸಿಕೊಳ್ಳುವ ನಿಟ್ಟಿನಲ್ಲಿ ತನ್ನ ಎರಡು ವಿದೇಶಿ ಕಂಪನಿಗಳನ್ನು ಮಾರಾಟ ಮಾಡಲು ಮುಂದಾಗಿರುವುದಾಗಿ ವರದಿ ತಿಳಿಸಿದೆ.

ಬೈಜೂ ರವೀಂದ್ರನ್‌ ನೇತೃತ್ವದ ಖಾಸಗಿ ಸ್ಟಾರ್ಟ್‌ ಅಪ್‌ ಕಂಪನಿ ಸುಮಾರು 8,195 ಕೋಟಿ ರೂಪಾಯಿಗೆ ಎರಡು ವಿದೇಶಿ ಕಂಪನಿಗಳನ್ನು ಖರೀದಿಸಿತ್ತು. ಆದರೆ ಏತನ್ಮಧ್ಯೆ ಅಮೆರಿಕದ ಕಂಪನಿಯೊಂದರಿಂದ ಪಡೆದಿದ್ದ 9,956 ಕೋಟಿ ರೂಪಾಯಿ ಸಾಲವನ್ನು ಮರುಪಾವತಿಸಬೇಕಾಗಿದೆ. ಇದರಿಂದಾಗಿ ಎರಡು ವಿದೇಶಿ ಕಂಪನಿಗಳನ್ನು ಮಾರಾಟ ಮಾಡಲು ಸಿದ್ಧತೆ ನಡೆಸಿದೆ ಎಂದು ವರದಿ ಹೇಳಿದೆ.

ಬೈಜೂಸ್‌ ಕಂಪನಿ ಮಕ್ಕಳ ಡಿಜಿಟಲ್‌ ರೀಡಿಂಗ್‌ ಪ್ಲ್ಯಾಟ್‌ ಫಾರಂ ಎಪಿಕ್‌ ಅನ್ನು 500 ಮಿಲಿಯನ್‌ ಡಾಲರ್‌ ಗೆ (ಅಂದಾಜು 3,729.8 ಕೋಟಿ) ಹಾಗೂ ಅಪ್‌ ಸ್ಕಿಲ್ಲಿಂಗ್‌ ಪ್ಲ್ಯಾಟ್‌ ಫಾರಂ ಗ್ರೇಟ್‌ ಲರ್ನಿಂಗ್‌ ಅನ್ನು 600 ಮಿಲಿಯನ್‌ ಡಾಲರ್‌ (ಸುಮಾರು 4,466 ಕೋಟಿ)ಗೆ ಖರೀದಿಸಿತ್ತು. ಇದೀಗ ಬೈಜೂಸ್‌ ಕಂಪನಿ ಈ ಎಪಿಕ್‌ ಮತ್ತು ಗ್ರೇಟ್‌ ಲರ್ನಿಂಗ್‌ ಕಂಪನಿಗಳನ್ನು 800 ಮಿಲಿಯನ್‌ ಡಾಲರ್‌ ನಿಂದ ಒಂದು ಬಿಲಿಯನ್‌ ಡಾಲರ್‌ ಮೊತ್ತಕ್ಕೆ ಮಾರಾಟ ಮಾಡಲು ನಿರ್ಧರಿಸಿರುವುದಾಗಿ ವರದಿ ತಿಳಿಸಿದೆ.

ಮತ್ತೊಂದೆಡೆ ಸಾಲದ ಸುಳಿಗೆ ಸಿಲುಕಿರುವ ಬೈಜೂಸ್‌ ಈಕ್ವಿಟಿ ಮಾರಾಟದ ಮೂಲಕ ನಗದನ್ನು ಕ್ರೋಢೀಕರಿಸಲು ಪ್ರಯತ್ನಿಸುತ್ತಿದೆ. ಸಾಲ ಮರುಪಾವತಿಗಾಗಿ ಬೈಜೂಸ್‌ ಅಮೆರಿಕದ ಬ್ಯಾಂಕರ್ಸ್‌ ಜೊತೆ ಸಂಪರ್ಕದಲ್ಲಿದ್ದು, ಮಾತುಕತೆ ನಡೆಸುತ್ತಿರುವುದಾಗಿ ವರದಿ ವಿವರಿಸಿದೆ.

LEAVE A REPLY

Please enter your comment!
Please enter your name here