
ಪುತ್ತೂರು: ಪುತ್ತೂರಿನಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆಂದು ಕಬಕ ಗ್ರಾಮದ ಸರ್ವೆ ನಂ.260/1ಪಿನಲ್ಲಿ 23.25 ಎಕ್ರೆ ಜಮೀನು ಕಾದಿರಿಸಿದರೂ, ಕ್ರೀಡಾಂಗಣ ನಿರ್ಮಾಣಕ್ಕೆ ಯಾವುದೇ ಕ್ರಮ ಕೈಗೊಳ್ಳದೇ ಇರುವ ಹಿನ್ನೆಲೆಯಲ್ಲಿ ಪುತ್ತೂರು ಕ್ರಿಕೆಟ್ ಯೂನಿಯನ್ ಪದಾಧಿಕಾರಿಗಳು ಶಾಸಕರ ಮೂಲಕ ಇಲಾಖೆಯ ಗಮನಕ್ಕೆ ತಂದಿದ್ದರು.
ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಎಸೋಸಿಯೇಶನ್ ಅಧ್ಯಕ್ಷ ರಘುರಾಮ ಭಟ್ ಅವರು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರನ್ನು ಭೇಟಿ ಮಾಡಿ ಅತಿ ಶೀಘ್ರದಲ್ಲಿ ಪುತ್ತೂರಿನಲ್ಲಿ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣದ ಭರವಸೆ ನೀಡಿದ್ದಾರೆ.
ಸ್ಥಳೀಯ ಕ್ರಿಕೆಟ್ ಕ್ರೀಡಾಪಟುಗಳಿಗೆ ತರಬೇತಿ ನೀಡುವುದು ಮತ್ತು ಕ್ರಿಕೆಟ್ ಆಟವನ್ನು ಇನ್ನಷ್ಟೂ ಅಭಿವೃದ್ಧಿ ಪಡಿಸುವುದು ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣದ ಹಿಂದಿರುವ ಪ್ರಮುಖ ಉದ್ದೇಶವಾಗಿದೆ. ಇದರ ಜತೆಗೆ ಜಿಲ್ಲಾ ಕೇಂದ್ರವಾಗಲು ಎಲ್ಲಾ ಅರ್ಹತೆ ಹೊಂದಿರುವ ಪುತ್ತೂರಿಗೆ ಸುಸಜ್ಜಿತ ಕ್ರಿಕೆಟ್ ಕ್ರೀಡಾಂಗಣದ ಅವಶ್ಯಕತೆಯೂ ಇತ್ತು.
ಈ ಕ್ರೀಡಾಂಗಣದಿಂದಾಗಿ ಪ್ರವಾಸೋದ್ಯಮ, ಸ್ಥಳೀಯರಿಗೆ ಉದ್ಯೋಗಾವಕಾಶ ಹಾಗೂ ನಗರದ ಬೆಳವಣಿಗೆಗೆ ಸಹಕಾರಿಯಾಗಲಿದೆ. ಕ್ರೀಡಾಂಗಣಕ್ಕೆ ಕಬಕ ಮತ್ತು ಬಲಾ°ಡು ಮೂಲಕ ರಸ್ತೆಯ ವ್ಯವಸ್ಥೆಯಿದೆ. ಈ ಹಿಂದೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿತ್ತು. ಆದರೆ ಇದನ್ನು ಅಭಿವೃದ್ಧಿ ಪಡಿಸುವ ಕಾರ್ಯ ನಡೆಯದಿದ್ದಾಗ ಪುತ್ತೂರು ಕ್ರಿಕೆಟ್ ಯೂನಿಯನ್ ಕ್ಲಬ್ ಶಾಸಕರ ಗಮನಕ್ಕೆ ತಂದಿದ್ದರು.