ಕೊಲಂಬೊ: ಏಷ್ಯಾಕಪ್ ಏಕದಿನ ಟೂರ್ನಿಯ ಸೂಪರ್-4 ಹಂತದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಕುತೂಹಲಕಾರಿ ಹಣಾಹಣಿಗೆ ಮಳೆ ಅಡ್ಡಿಪಡಿಸಿದೆ. ನಾಯಕ ರೋಹಿತ್ ಶರ್ಮ ಹಾಗೂ ಶುಭಮಾನ್ ಗಿಲ್ ಶತಕದ ಜತೆಯಾಟವಾಡಿ ಭಾರತಕ್ಕೆ ಭದ್ರ ಆರಂಭ ಒದಗಿಸಿದ ಬಳಿಕ ಸುರಿದ ಭಾರಿ ಮಳೆಯಿಂದ ಪಂದ್ಯವನ್ನು ಮೀಸಲು ದಿನವಾದ ಸೋಮವಾರಕ್ಕೆ ಮುಂದೂಡಲಾಗಿದೆ. ಮಳೆಗೆ ಒದ್ದೆಯಾಗಿದ್ದ ಮೈದಾನವನ್ನು ಒಣಗಿಸಲು ಆರ್. ಪ್ರೇಮದಾಸ ಕ್ರೀಡಾಂಗಣದ ಸಿಬ್ಬಂದಿ ಕಠಿಣ ಪರಿಶ್ರಮ ಪಟ್ಟರೂ, ಮಳೆ ಮತ್ತೆ ಮರುಕಳಿಸಿದ ಕಾರಣ ಪಂದ್ಯವನ್ನು ಮೀಸಲು ದಿನಕ್ಕೆ ವಿಸ್ತರಿಸುವುದು ಅನಿವಾರ್ಯವೆನಿಸಿತು.

ಮಳೆ ಮುನ್ಸೂಚನೆಯ ನಡುವೆ ಪಂದ್ಯ ನಿಗದಿತ ಸಮಯಕ್ಕೆ ಆರಂಭಗೊಂಡಿತು. ಟಾಸ್ ಗೆದ್ದ ಪಾಕಿಸ್ತಾನ ನಾಯಕ ಬಾಬರ್ ಅಜಮ್ ಟೀಮ್ ಇಂಡಿಯಾವನ್ನು ಮೊದಲು ಬ್ಯಾಟಿಂಗ್‌ಗೆ ಆಹ್ವಾನ ನೀಡಿದರು. ನಾಯಕ ರೋಹಿತ್ ಶರ್ಮ (56 ರನ್, 49 ಎಸೆತ, 6 ಬೌಂಡರಿ, 4 ಸಿಕ್ಸರ್) ಹಾಗೂ ಶುಭಮಾನ್ ಗಿಲ್ (58 ರನ್, 52 ಎಸೆತ, 10 ಬೌಂಡರಿ) ಅರ್ಧಶತಕ ಸಿಡಿಸುವ ಮೂಲಕ ಭಾರತಕ್ಕೆ ಉತ್ತಮ ಆರಂಭ ಒದಗಿಸಿದರು. ಆದರೆ ಇವರಿಬ್ಬರು ಕೇವಲ 3 ರನ್ ಅಂತರದಲ್ಲಿ ಔಟಾದ ಬೆನ್ನಲ್ಲೇ, ಭಾರತ ತಂಡ 24.1 ಓವರ್‌ಗಳಲ್ಲಿ 2 ವಿಕೆಟ್‌ಗೆ 147 ರನ್‌ಗಳಿಸಿದ್ದಾಗ ಮಳೆಯಿಂದ ಆಟ ಸ್ಥಗಿತಗೊಂಡಿತು. ಆಗ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (8*) ಮತ್ತು ಮರಳಿ ಕಣಕ್ಕಿಳಿದಿರುವ ಕನ್ನಡಿಗ ಹಾಗೂ ವಿಕೆಟ್ ಕೀಪರ್-ಬ್ಯಾಟರ್ ಕೆಎಲ್ ರಾಹುಲ್ (17*) 3ನೇ ವಿಕೆಟ್‌ಗೆ 24 ರನ್ ಪೇರಿಸಿ ಕ್ರೀಸ್‌ನಲ್ಲಿದ್ದರು. ಬಳಿಕ ಆಟ ಪುನರಾರಂಭಗೊಳ್ಳಲು ಮಳೆ ಅವಕಾಶ ನೀಡಲಿಲ್ಲ. ಸೋಮವಾರ 24.1 ಓವರ್‌ಗಳಿಂದಲೇ ಟೀಮ್ ಇಂಡಿಯಾ ಬ್ಯಾಟಿಂಗ್ ಮುಂದುವರಿಸಲಿದೆ.
ರೋಹಿತ್-ಗಿಲ್ ಭರ್ಜರಿ ಆರಂಭ: ನೇಪಾಳ ವಿರುದ್ಧ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಗೆಲುವು ತಂದಿದ್ದ ರೋಹಿತ್ ಹಾಗೂ ಶುಭಮಾನ್ ಗಿಲ್ ಪಾಕ್ ವಿರುದ್ಧವೂ ಅದೇ ಾರ್ಮ್ ಮುಂದುವರಿಸಿದರು. ಪಾಕ್‌ನ ಆರಂಭಿಕ ಮೇಲುಗೈ ಯೋಜನೆಯನ್ನೇ ಬುಡಮೇಲು ಮಾಡಿ ಭಾರತಕ್ಕೆ ಉತ್ತಮ ಅಡಿಪಾಯ ಒದಗಿಸಿದರು. ಶಹೀನ್ ಷಾ ಅಫ್ರಿದಿಯ ಮೊದಲ ಓವರ್‌ನಲ್ಲಿ ಸಿಕ್ಸರ್ ಸಿಡಿಸಿ ಖಾತೆ ತೆರೆದ ರೋಹಿತ್ ಬಳಿಕ ನಿಧಾನಗತಿಯ ಬ್ಯಾಟಿಂಗ್ ಮೂಲಕ ವಿಕೆಟ್ ಬೀಳದಂತೆ ಕ್ರೀಸ್‌ನಲ್ಲಿ ನಿಂತರು. ಮತ್ತೊಂದೆಡೆ ಗಿಲ್, ಶಹೀನ್-ನಸೀಮ್ ಜೋಡಿಯ ಎದುರು ಬಿರುಸಿನ ಬ್ಯಾಟಿಂಗ್ ನಡೆಸಿ, 37 ಎಸೆತಗಳಲ್ಲಿ ಏಕದಿನ ಕ್ರಿಕೆಟ್‌ನಲ್ಲಿ 8ನೇ ಅರ್ಧಶತಕ ಪೂರೈಸಿದರು. ಸ್ಪಿನ್ನರ್ ಶಾದಾಬ್ ಖಾನ್‌ಗೆ 2 ಸಿಕ್ಸರ್ ಬಾರಿಸಿ ಬಿರುಸಿನಾಟಕ್ಕಿಳಿದ ರೋಹಿತ್ 42 ಎಸೆತದಲ್ಲಿ ಅರ್ಧಶತಕ ಪೂರೈಸಿದರು. ಇದು ಏಕದಿನ ಕ್ರಿಕೆಟ್‌ನಲ್ಲಿ ಅವರಿಗೆ 50ನೇ ಅರ್ಧಶತಕವಾಗಿದೆ. ಮೊದಲ ವಿಕೆಟ್‌ಗೆ ಇವರಿಬ್ಬರು 121 ರನ್ ಕಲೆಹಾಕಿ ಭಾರತಕ್ಕೆ ಬೃಹತ್ ಮೊತ್ತದ ಭರವಸೆ ಮೂಡಿಸಿದರು. 8 ಎಸೆತಗಳ ಅಂತರದಲ್ಲಿ ಇಬ್ಬರೂ ಪೆವಿಲಿಯನ್ ಸೇರಿದರು. ಶುಭಮಾನ್ ಬಳಿಕ ವಿಕೆಟ್ ಕೀಪರ್-ಬ್ಯಾಟರ್ ಕೆಎಲ್ ರಾಹುಲ್ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಆಗಮಿಸಿದರು. ವಿರಾಟ್ ಕೊಹ್ಲಿ ಜತೆಗೂಡಿ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿ ಉತ್ತಮ ವಲಯದಲ್ಲಿ ಕಾಣಿಸಿಕೊಂಡರು.

ಗಂಟೆಗೂ ಅಧಿಕ ಆಟ ಸ್ಥಗಿತ: ಟೀಮ್ ಇಂಡಿಯಾ 24.1 ಓವರ್ ಆಡಿದಾಗ ಸುರಿದ ಭಾರಿ ಮಳೆಯಿಂದಾಗಿ ಪಂದ್ಯವನ್ನು 4 ಗಂಟೆ ಅಧಿಕ ಕಾಲ ಆಟ ನಿಲ್ಲಿಸಲಾಗಿತ್ತು. ಭಾರೀ ಮಳೆಯಿಂದ ಮೈದಾನ ಒದ್ದೆಯಾಗಿದ್ದರಿಂದ ಪಂದ್ಯ ಆರಂಭ ವಿಳಂಬವಾಯಿತು.
ರಾತ್ರಿ 9 ಗಂಟೆಗೆ ತಲಾ 34 ಓವರ್‌ಗಳ ಪಂದ್ಯ ಆರಂಭಕ್ಕೆ ಅಂಪೈರ್‌ಗಳು ಗ್ರೀನ್ ಸಿಗ್ನಲ್ ನೀಡುವ ಸಿದ್ಧತೆಯಲ್ಲಿದ್ದಾಗ ಮತ್ತೆ ಮಳೆ ಸುರಿಯಲಾರಂಭಿಸಿತು. ಇದರಿಂದ ಪಂದ್ಯವನ್ನು ಮೀಸಲು ದಿನಕ್ಕೆ ಮುಂದೂಡಲಾಯಿತು.
ಇಂದು ಪಂದ್ಯ ಆರಂಭ
ಮಧ್ಯಾಹ್ನ 3.00
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಸತತ 3 ದಿನ ಆಡುವ ಸವಾಲು: ಪಾಕ್ ವಿರುದ್ಧದ ಪಂದ್ಯ ಮೀಸಲು ದಿನಕ್ಕೆ ವಿಸ್ತರಣೆಯಾಗಿರುವುದರಿಂದ ಭಾರತಕ್ಕೆ ಸತತ 3 ದಿನ ಆಡುವ ಸವಾಲು ಎದುರಾಗಿದೆ. ಯಾಕೆಂದರೆ ಭಾರತ ತಂಡ ಮಂಗಳವಾರ ಮತ್ತೆ ಆತಿಥೇಯ ಶ್ರೀಲಂಕಾ ತಂಡದ ಸವಾಲು ಎದುರಿಸಬೇಕಾಗಿದೆ.
ಶ್ರೇಯಸ್‌ಗೆ ಮತ್ತೆ ಗಾಯದ ಚಿಂತೆ: ಬೆನ್ನು ನೋವಿನ ಶಸಚಿಕಿತ್ಸೆ ನಂತರ ಸಂಪೂರ್ಣ ಚೇತರಿಸಿಕೊಂಡು ಫಿಟ್ನೆಸ್ ಸಾಬೀತು ಪಡಿಸುವ ಮೂಲಕ ಏಷ್ಯಾಕಪ್‌ಗೆ ಟೀಮ್ ಇಂಡಿಯಾವನ್ನು ಮರಳಿ ಕೂಡಿಕೊಂಡಿದ್ದ ಮುಂಬೈ ಬ್ಯಾಟರ್ ಶ್ರೇಯಸ್ ಅಯ್ಯರ್ ಮತ್ತೆ ಗಾಯದ ಸಮಸ್ಯೆಗೆ ಸಿಲುಕಿದ್ದಾರೆ. ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಮುನ್ನ ಅಭ್ಯಾಸದ ವೇಳೆ ಶ್ರೇಯಸ್‌ಗೆ ಬೆನ್ನಿನ ಸ್ನಾಯು ಸೆಳೆತ ಕಾಣಿಸಿಕೊಂಡಿದೆ ಎಂದು ನಾಯಕ ರೋಹಿತ್ ಶರ್ಮ ಟಾಸ್ ವೇಳೆ ತಿಳಿಸಿದರು. ಇದರಿಂದಾಗಿ ಮೊದಲಿಗೆ 11ರ ಬಳಗದಲ್ಲಿರದ ಕೆಎಲ್ ರಾಹುಲ್‌ಗೆ ಕೊನೇ ಕ್ಷಣದಲ್ಲಿ ತಂಡದಲ್ಲಿ ಸ್ಥಾನ ಲಭಿಸಿತು. ನೇಪಾಳ ವಿರುದ್ಧ ಪಂದ್ಯಕ್ಕೆ ಅಲಭ್ಯರಾಗಿದ್ದ ಜಸ್‌ಪ್ರೀತ್ ಬುಮ್ರಾಗೆ ಮೊಹಮದ್ ಶಮಿ ಸ್ಥಾನ ಬಿಟ್ಟುಕೊಟ್ಟರು.