ದೆಹಲಿ : ಉತ್ತರಾಖಂಡ ರಾಜ್ಯದ ಉತ್ತರಕಾಶಿಯಲ್ಲಿ 16 ದಿನಗಳ ಕಾಲ ಕುಸಿದ ಸುರಂಗದೊಳಗೆ ಸಿಲುಕಿ, ಸುರಂಗದಿಂದ ಸಾವನ್ನೇ ಗೆದ್ದು ಬಂದ ಕಾರ್ಮಿಕರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಿಷಿಕೇಶ್ ಏಮ್ಸ್ ಆಡಳಿತ ಮಂಡಳಿ ಆಸ್ಪತ್ರೆಗೆ ದಾಖಲಾಗಿದ್ದ 41 ಕಾರ್ಮಿಕರ ಪೈಕಿ 40 ಮಂದಿಗೆ ಕ್ಲಿಯರೆನ್ಸ್ ನೀಡಿ ಬಿಡುಗಡೆ ಮಾಡಿದೆ.
ಆಸ್ಪತ್ರೆಗೆ ದಾಖಲಾಗಿದ್ದ ಕಾರ್ಮಿಕರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಯಾವುದೇ ಕಾರ್ಮಿಕರಲ್ಲಿ ಗಾಯ ಕಂಡುಬಂದಿಲ್ಲ. ಇದಲ್ಲದೇ ಎಲ್ಲ ಕಾರ್ಮಿಕರನ್ನು ತೀವ್ರ ಆರೋಗ್ಯ ತಪಾಸಣೆ ನಡೆಸಲಾಗಿದೆ. ಎಲ್ಲರೂ ಆರೋಗ್ಯವಾಗಿದ್ದಾರೆ ಎಂದು ಏಮ್ಸ್ ವೈದ್ಯಕೀಯ ಅಧೀಕ್ಷಕ ರಿಷಿಕೇಶ್, ಪ್ರೊ. ಆರ್.ಬಿ.ಕಾಲಿಯಾ ಹೇಳಿದ್ದಾರೆ. ಇನ್ನು ಕಾರ್ಮಿಕರ ರಕ್ತ, ಕಿಡ್ನಿ, ಇಸಿಜಿ, ಎಬಿಜಿ, ಲಿವರ್ ಫಂಕ್ಷನ್ ಟೆಸ್ಟ್, ಎಕ್ಸ್ ರೇ, ಎಕೋಕಾರ್ಡಿಯೋಗ್ರಫಿ, ಎಬಿಜಿ ಪರೀಕ್ಷೆಗಳನ್ನು ಮಾಡಲಾಗಿದೆ. ಎಲ್ಲಾ ಕಾರ್ಮಿಕರು ದೈಹಿಕವಾಗಿ ಆರೋಗ್ಯಕರವಾಗಿದ್ದಾರೆ. ಕಾರ್ಮಿಕರಿಗೆ ತಮ್ಮ ಊರುಗಳಿಗೆ ತೆರಳಲು ಏಮ್ಸ್ ಅನುಮತಿ ನೀಡಿದೆ.
7 ರಾಜ್ಯಗಳ 41 ಕಾರ್ಮಿಕರನ್ನು ಆರೋಗ್ಯ ತಪಾಸಣೆಗಾಗಿ ಏಮ್ಸ್‌ಗೆ ಕರೆತರಲಾಗಿತ್ತು. ಇದರಲ್ಲಿ ಜಾರ್ಖಂಡ್‌ನ 15, ಉತ್ತರ ಪ್ರದೇಶದಿಂದ 8, ಬಿಹಾರ ಮತ್ತು ಒರಿಸ್ಸಾದಿಂದ ತಲಾ 5, ಪಶ್ಚಿಮ ಬಂಗಾಳದಿಂದ 3, ಉತ್ತರಾಖಂಡ ಮತ್ತು ಅಸ್ಸಾಂನಿಂದ ತಲಾ 2 ಮತ್ತು ಹಿಮಾಚಲ ಪ್ರದೇಶದ ಒಬ್ಬರಾಗಿದ್ದಾರೆ. ಒಬ್ಬ ಕಾರ್ಮಿಕನನ್ನು ಹೊರತುಪಡಿಸಿ ಉಳಿದ 40 ಕಾರ್ಮಿಕರನ್ನು ವೈದ್ಯಕೀಯ ಅನುಮತಿ ಪಡೆದು ಬಿಡುಗಡೆ ಮಾಡಲಾಗಿದೆ. ಮತ್ತೊರ್ವ ಕಾರ್ಮಿಕನಿಗೆ ಮತ್ತೊಮ್ಮೆ ಟೆಸ್ಟ್ ಮಾಡಿದ ಬಳಿಕ ಬಿಡುಗಡೆ ಮಾಡಲು ಏಮ್ಸ್ ವೈದ್ಯರು ನಿರ್ಧಾರ ಮಾಡಿದ್ದಾರೆ.
ಯಾವುದೇ ಕಾರ್ಮಿಕರಿಗೆ ಗಂಭೀರ ಅಥವಾ ಆತಂಕಕಾರಿ ಸಮಸ್ಯೆ ಇಲ್ಲ. ಆದರೂ ಈ ಘಟನೆ ಭವಿಷ್ಯದಲ್ಲಿ ಕಾರ್ಮಿಕರಲ್ಲಿ ಮಾನಸಿಕ ಬದಲಾವಣೆಗಳನ್ನು ಉಂಟುಮಾಡುವ ಸಾಧ್ಯತೆ ಇದೆ. ಹೀಗಾಗಿ ಕಾರ್ಮಿಕರು ಎರಡು ವಾರಗಳ ನಂತರ ಅಥವಾ ಅಗತ್ಯವಿದ್ದರೆ ತಮ್ಮ ಹತ್ತಿರದ ಆರೋಗ್ಯ ಕೇಂದ್ರದಲ್ಲಿ ವೈದ್ಯರನ್ನು ಸಂಪರ್ಕಿಸಲು ಸೂಚಿಸಲಾಗಿದೆ.
ಆರೋಗ್ಯ ತಪಾಸಣೆ ಮುಗಿಸಿ 20 ಕಾರ್ಮಿಕರು ಈಗಾಗಲೇ ತಮ್ಮ ರಾಜ್ಯ ತಲುಪಿದ್ದಾರೆ. ಎರಡು ಬಸ್‌ಗಳಲ್ಲಿ 20 ಕಾರ್ಮಿಕರನ್ನು ಜಾಲಿ ಗ್ರಾಂಟ್ ವಿಮಾನ ನಿಲ್ದಾಣಕ್ಕೆ ಕಳುಹಿಸಲಾಗಿದೆ. ಅಲ್ಲಿಂದ ಈ ಎಲ್ಲ ಕಾರ್ಮಿಕರು ವಿಮಾನದ ಮೂಲಕ ತಮ್ಮ ಮನೆಗಳಿಗೆ ಮರಳಿದ್ದಾರೆ. ಮೊದಲ ಬ್ಯಾಚ್ ನಲ್ಲಿ ಜಾರ್ಖಂಡ್‌ನ 15 ಕಾರ್ಮಿಕರು ಮತ್ತು ಒರಿಸ್ಸಾದ 5 ಕಾರ್ಮಿಕರು ಇದ್ದು, ಆಯಾ ರಾಜ್ಯಗಳ ರಾಜ್ಯದ ಅಧಿಕಾರಿಗಳು ಕಾರ್ಮಿಕರನ್ನು ಸ್ವಾಗತಿಸಿದ್ದಾರೆ.