ನವದೆಹಲಿ: ತಮಿಳುನಾಡಿನಲ್ಲಿ ಉತ್ತಮ ಹಿಂಗಾರು ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿ ಕರ್ನಾಟಕಕ್ಕೆ ಕೊಂಚ ರಿಲೀಫ್ ನೀಡಿದ್ದು ಇಂತಿಷ್ಟೆ ನೀರು ಹರಿಸುವಂತೆ ಯಾವುದೇ ಸೂಚನೆ ನೀಡಿಲ್ಲ. ಇಂದು ಸಭೆ ನಡೆಸಿದ ಅಧ್ಯಕ್ಷ ವೀನಿತ್ ಗುಪ್ತಾ ನೈಸರ್ಗಿಕ ಹರಿವು ಕಡಿಮೆಯಾದಲ್ಲಿ ಮಾತ್ರ ಸುಪ್ರೀಂ ಕೋರ್ಟ್ ನಿಯಮದ ಅನ್ವಯ ನೀರು ಹರಿಸಲು ಸೂಚನೆ ನೀಡಿದ್ದಾರೆ.
ಸಭೆಯಲ್ಲಿ ಕರ್ನಾಟಕ ಬಾಕಿ ಉಳಿಸಿಕೊಂಡಿರುವ 11 TMC ಹಾಗೂ ಡಿಸೆಂಬರ್ ತಿಂಗಳ 6 TMC ಸೇರಿ ಒಟ್ಟು 17 TMC ನೀರು ಹರಿಸಬೇಕು ಎಂದು ತಮಿಳುನಾಡು ಪರ ಅಧಿಕಾರಿಗಳು ಮನವಿ ಮಾಡಿದರು. ಇದಕ್ಕೆ ಕರ್ನಾಟಕ ವಿರೋಧ ವ್ಯಕ್ತಪಡಿಸಿತು. ನವೆಂಬರ್‌ನಲ್ಲಿ 2,600 ಕ್ಯೂಸೆಕ್ ನೀರು ಹರಿಸುವಂತೆ ಸಮಿತಿ ಶಿಫಾರಸು ಮಾಡಿತ್ತು. ಆದ್ರೆ 2,600 ಕ್ಯೂಸೆಕ್‌ಗಿಂತ ಹೆಚ್ಚಿನ ನೀರು ಹರಿದು ಹೋಗಿದೆ.
ಜಲಾಶಯಗಳ ಕೆಳ ಪ್ರದೇಶದಲ್ಲಿ ಮಳೆ ಸುರಿಯುತ್ತಿರುವುದರಿಂದ ನಿಗದಿತ ಪ್ರಮಾಣಕ್ಕಿಂತ ನೀರು ನೈಸರ್ಗಿಕವಾಗಿ ಹರಿಯುತ್ತಿದೆ. ನಿತ್ಯ 3,000 ಕ್ಯೂಸೆಕ್ ನೀರು ನೈಸರ್ಗಿಕವಾಗಿ ಹರಿಯುತ್ತಿದೆ. ತಮಿಳುನಾಡಿನಲ್ಲೂ ಉತ್ತಮ ಹಿಂಗಾರು ಮಳೆಯಾಗುತ್ತಿದೆ. ಹೀಗಾಗಿ ಹೆಚ್ಚಿನ ನೀರು ಕೇಳಬಾರದು ಎಂದು ಆಕ್ಷೇಪ ವ್ಯಕ್ತಪಡಿಸಿತು.
ಎರಡೂ ಬದಿಯ ಮನವಿ ಆಲಿಸಿದ ಕಾವೇರಿ ನೀರು ನಿಯಂತ್ರಣ ಸಮಿತಿ ನವೆಂಬರ್ 23ರಿಂದ ಡಿಸೆಂಬರ್ 23ರ ವರಗೆ ನೀರು ಹರಿಸಿ, ನೈಸರ್ಗಿಕವಾಗಿ ಎಷ್ಟು ನೀರು ತಮಿಳುನಾಡು ಸೇರುತ್ತಿದೆ ಅದು ಸೇರಲಿ, ಕಾವೇರಿ ಅಚ್ಚುಕಟ್ಟು ಜಲಾಶಯಗಳಿಂದ ನೀರು ಹರಿಸುವ ಅಗತ್ಯ ಇಲ್ಲ, ಒಂದು ವೇಳೆ ನೈಸರ್ಗಿಕ ಹರಿವು ತಗ್ಗಿದ್ದಲ್ಲಿ ಮಾತ್ರ ಸುಪ್ರೀಂ ಕೋರ್ಟ್ ಆದೇಶದಂತೆ ನೀರು ಬಿಡಬೇಕು ಎಂದು ಶಿಫಾರಸು ಮಾಡಿತು. ಹೀಗಾಗಿ ಸದ್ಯ ಕರ್ನಾಟಕದ ಮೇಲೆ ಸದ್ಯ ಯಾವುದೇ ಒತ್ತಡಗಳು ಇಲ್ಲದಂತಾಗಿದ್ದು ನೈಸರ್ಗಿಕ ಹರಿವು ಕಡಿಮೆಯಾದಲ್ಲಿ ಮಾತ್ರ ಜಲಾಶಯಗಳಿಂದ ನಿತ್ಯ 2,700 ಕ್ಯೂಸೆಕ್ ನೀರು ಹರಿಸಬೇಕಿದೆ.