ಮಂಗಳೂರು: ಅಧಿಕಾರಕ್ಕೆ ಬಂದು ಆರೇ ತಿಂಗಳಿಗೆ ಜನಪ್ರಿಯತೆಯನ್ನು ಕಳೆದುಕೊಂಡ ಸರ್ಕಾರ ಎಂದರೆ ಅದು ಕಾಂಗ್ರೆಸ್ ಮಾತ್ರ ಎಂದು ಬಿಜೆಪಿ ನೂತನ ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವ್ಯಂಗ್ಯವಾಡಿದ್ದಾರೆ.
ಬಿಜೆಪಿಯ ನೂತನ ರಾಜ್ಯ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಮಂಗಳೂರಿಗೆ ಆಗಮಿಸಿದ ಬಿ.ವೈ.ವಿಜಯೇಂದ್ರ ಅವರಿಗೆ ಸೇಬು ಹಣ್ಣಿನ ಹಾರ ಹಾಕುವ ಮೂಲಕ ಭರ್ಜರಿ ಸ್ವಾಗತ ಮಾಡಲಾಯಿತು.
ಈ ವೇಳೆ ಮಾತನಾಡಿದ ಅವರು ಪಕ್ಷಾತೀತರಾದ ವಿಧಾನ ಸಭಾಧ್ಯಕ್ಷರಲ್ಲಿ ಜಾತಿ ಧರ್ಮ ಕಾಣುವ ಧೊರಣೆ ಕಂಡ ಜಮೀರ್ ಅಹ್ಮದ್ ಅವರು ರಾಜೀನಾಮೆ ನೀಡಲೇಬೇಕು ಇಲ್ಲವಾದರೆ ಮುಂದಿನ ಅಧಿವೇಶನದಲ್ಲಿ ಅವರು ಹೇಗೆ ಪಾಲ್ಗೊಳ್ಳುತ್ತಾರೋ ನೋಡುತ್ತೇವೆ ಎಂದು ಸವಾಲೊಡ್ಡಿದರು.
ಬರದಲ್ಲಿ ಕಂಗೆಟ್ಟ ರಾಜ್ಯದ ರೈತರಿಗೆ ಸಾಂತ್ವನ ಕ್ರಮವನ್ನು ಆದ್ಯತೆ ಮೇರೆಗೆ ಸರಕಾರ ಕೈಗೊಳ್ಳುವ ಬದಲಿಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವ ಬಗ್ಗೆ ಕಾಂಗ್ರೆಸ್ ಚರ್ಚೆ ಮಾಡಿದೆ, ನಿಗಮಮಂಡಳಿಗೆ ನೇಮಕ ಮಾಡುವ ಬಗ್ಗೆ ಚರ್ಚೆ ಮಾಡಿರುವುದು ರೈತರಿಗೆ ಮಾಡಿದ ಅವಮಾನ ಎಂದು ರಾಜ್ಯ ಸರಕಾರದ ವಿರುದ್ಧ ಕಿಡಿಕಾರಿದರು.
ಆಡಳಿತ ಪಕ್ಷದ ಶಾಸಕರಿಗೇ ತಮ್ಮ ಕ್ಷೇತ್ರದಲ್ಲಿ ಗೌರವಯುತವಾಗಿ ತಲೆ ಎತ್ತಿ ನಡೆಯುವ ಪರಿಸ್ಥಿತಿ ಇಲ್ಲ. ನಮ್ಮ ಸರಕಾರ ಇದ್ದಾಗ ಬೇಸಿಗೆಯಲ್ಲಿ ಕೂಡಾ ವಿದ್ಯುತ್ ಪೂರೈಕೆ ಸರಿಯಾಗಿ ಆಗುತ್ತಿತ್ತು. ಈಗ ವಿದ್ಯುತ್ ಪರಿಸ್ಥಿತಿ ಹದಗೆಟ್ಟಿದೆ. ಜನರು ನೀರಿಲ್ಲದೆ ಕಂಗೆಟ್ಟಿರುವಾಗ ಸಿಎಂ ಮನೆಗೆ ಕೋಟಿ ಕೋಟಿ ಖರ್ಚು ಮಾಡುತ್ತಾರೆ, ಸಚಿವರಿಗೆ ಹೊಸ ಕಾರು ಖರೀದಿಸುತ್ತಾರೆ. ಇದರೆಲ್ಲದರ ವಿರುದ್ಧ ಬಿಜೆಪಿ ಸದನದ ಒಳಗೆ ಹೊರಗೆ ಹೋರಾಡಲಿದೆ ಎಂದು ಎಚ್ಚರಿಕೆ ನೀಡಿದರು.