ಮುಂಬೈ: ಸಹಾರಾ ಗ್ರೂಪ್ ಸಂಸ್ಥಾಪಕ ಮತ್ತು ಅಧ್ಯಕ್ಷ ಸುಬ್ರತಾ ರಾಯ್ ಅವರು ದೀರ್ಘಕಾಲದ ಅನಾರೋಗ್ಯದಿಂದ ಮುಂಬೈ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಿಂದ ಬಳಲುತ್ತಿದ್ದ ಸುಬ್ರತಾ ರಾಯ್ (75) ಅವರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಭಾನುವಾರ ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಸಂಸ್ಥೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾದೇ ಹೃದಯ ಸ್ತಂಭನದಿಂದ ವಿಧಿವಶರಾದರು ಎಂದು ಸಹಾರಾ ಗ್ರೂಪ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಸುಬ್ರತಾ ರಾಯ್ ಅವರು ಪತ್ನಿ ಸ್ವಪ್ನಾ ರಾಯ್ ಮತ್ತು ಇಬ್ಬರು ಪುತ್ರರಾದ ಸುಶಾಂತೋ ರಾಯ್ ಮತ್ತು ಸೀಮಂತೋ ರಾಯ್ ಅವರನ್ನು ಅಗಲಿದ್ದಾರೆ.