ಕ್ಯಾಲಿಫೋರ್ನಿಯಾ: ವಿಶ್ವದಾದ್ಯಂತ ಎರಡು ಬಿಲಿಯನ್ ಗೂ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿರುವ ಜನಪ್ರಿಯ ಮೆಸ್ಸೇಜಿಂಗ್ ಆಯಪ್ ವಾಟ್ಸಾಪ್ ಸದಾ ಹೊಸ ಹೊಸ ಫೀಚರ್ ಗಳನ್ನು ಅಪ್ಡೇಟ್ ಮಾಡುತ್ತಿರುತ್ತದೆ. ಆರಂಭದಲ್ಲಿ ಕೇವಲ ಸಂದೇಶ ಕಳುಹಿಸಲು ಬಳಕೆಯಾಗುತ್ತಿದ್ದ ವಾಟ್ಸಪ್ ಇದೀಗ ಚಾನೆಲ್ ಗಳನ್ನು ಹೊಂದಿದೆ.
ಯೂಟ್ಯೂಬ್ ಗಳಲ್ಲಿ ಇದ್ದಂತೆ ವಾಟ್ಸಪ್ ನಲ್ಲಿಯೂ ಜಾಹೀರಾತುಗಳು ಕಾಣಿಸಲಿದೆ. ವಾಟ್ಸಪ್ ಸ್ಟೇಟಸ್ ಮತ್ತು ಚಾನೆಲ್ ಗಳಲ್ಲಿ ಜಾಹೀರಾತುಗಳನ್ನು ತರಲು ಸಂಸ್ಥೆ ಮುಂದಾಗಿದೆ. ಅಲ್ಲದೆ ಇದೇ ಸಮಯದಲ್ಲಿ ಹೊಸ ವಾಯ್ಸ್ ಮೆಸೇಜ್ ಮತ್ತು ಸ್ಟಿಕ್ಕರ್ ಫೀಚರ್ ಗಳನ್ನು ಅಭಿವೃದ್ಧಿಪಡಿಸುತ್ತಿದೆ. ಇದು ಕಂಪನಿಯು ತನ್ನ ಹಣಗಳಿಕೆಯ ತಂತ್ರಗಳನ್ನು ವಿಸ್ತರಿಸುವ ಮತ್ತು ಬಳಕೆದಾರರ ಅನುಭವವನ್ನು ಹೆಚ್ಚಿಸುವ ಉದ್ದೇಶವನ್ನು ಸೂಚಿಸುತ್ತವೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ವಾಟ್ಸಪ್ ಸಿಇಒ ವಿಲ್ ಕ್ಯಾತ್ ಕಾರ್ಟ್, ಸ್ಟೇಟಸ್ ಮತ್ತು ಚಾನೆಲ್ ಗಳಲ್ಲಿನ ಜಾಹೀರಾತುಗಳ ಸಂಭಾವ್ಯತೆಯ ಬಗ್ಗೆ ಸುಳಿವು ನೀಡಿದರು. ಮೆಸೇಜ್ ಕಳುಹಿಸುವ ಇನ್ ಬಾಕ್ಸ್ ಗೆ ಜಾಹೀರಾತುಗಳು ನುಗ್ಗುವುದಿಲ್ಲ ಎಂದು ಅವರು ಒತ್ತಿಹೇಳಿದರು. ಬದಲಾಗಿ, ಇವು ಪ್ರಾಥಮಿಕವಾಗಿ ಪಬ್ಲಿಕ್ ಬ್ರಾಡ್ ಕಾಸ್ಟಿಂಗ್ ಮತ್ತು ಗುಂಪು ಚರ್ಚೆಗಳಿಗೆ ಮೀಸಲಾಗಿರುವ ವಿಭಾಗಗಳಲ್ಲಿ ಜಾಹೀರಾತುಗಳು ಕಾಣಿಸಿಕೊಳ್ಳಬಹುದು.
ಜಾಹೀರಾತು ಮಾತ್ರವಲ್ಲದೆ ವಾಟ್ಸಪ್ ಹೊಸ ಫೀಚರ್ ಗಳಾದ ವಾಯ್ಸ್ ಮೆಸ್ಸೇಜಿಂಗ್ ಮತ್ತು ಸ್ಟಿಕ್ಕರ್ ಗಳ ಮೇಲೆ ಕೆಲಸ ಮಾಡುತ್ತಿದೆ. ಕಂಪನಿಯು ಬಳಕೆದಾರರಿಗೆ ವಾಯ್ಸ್ ರೆಕಾರ್ಡಿಂಗನ್ನು ಪಾಸ್ ಮಾಡಲು ಮತ್ತು ಪುನರಾರಂಭಿಸಲು ಅನುವು ಮಾಡಿಕೊಡುವ ವೈಶಿಷ್ಟ್ಯದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ವರದಿಯಾಗಿದೆ, ಜೊತೆಗೆ ವಾಯ್ಸ್ ಮೆಸೇಜ್ ಗಳಿಗೆ ಸ್ಟಿಕ್ಕರ್ ಗಳನ್ನು ಸೇರಿಸುವ ಬಗ್ಗೆ ಕೆಲಸ ಮಾಡಲಾಗುತ್ತದೆ.
ಜಾಹೀರಾತುಗಳ ಪರಿಚಯ ಮತ್ತು ಹೊಸ ಫೀಚರ್ ಗಳ ಅಭಿವೃದ್ಧಿಯು ಬಳಕೆದಾರ ಸ್ನೇಹಿ ಅನುಭವವನ್ನು ಉಳಿಸಿಕೊಂಡು ಅದರ ಆದಾಯದ ದಾರಿಗಳನ್ನು ಹೆಚ್ಚುಗೊಳಿಸಲು ವಾಟ್ಸಪ್ ನಡೆಯುತ್ತಿರುವ ಪ್ರಯತ್ನಗಳನ್ನು ಸೂಚಿಸುತ್ತದೆ.