ಬೆಂಗಳೂರು: ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕಿ ಕೆ.ಎಸ್.ಪ್ರತಿಮಾ (43ವರ್ಷ) ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರು ಚಾಲಕನನ್ನು ಬಂಧಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಬ್ಬ ಶಂಕಿತನನ್ನು ವಶಕ್ಕೆ ಪಡೆದಿರುವುದಾಗಿ ಬೆಂಗಳೂರು ಪೊಲೀಸರು ಸೋಮವಾರ (ನವೆಂಬರ್ 06) ಮಾಹಿತಿ ನೀಡಿದ್ದಾರೆ. ಪ್ರತಿಮಾ ಅವರ ಕಾರು ಚಾಲಕನನ್ನು ಸುಮಾರು ಹತ್ತು ದಿನಗಳ ಹಿಂದೆ ಕೆಲಸದಿಂದ ತೆಗೆದು ಹಾಕಲಾಗಿತ್ತು ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಬಿ.ದಯಾನಂದ್ ತಿಳಿಸಿದ್ದಾರೆ.
ಸರ್ಕಾರಿ ಗುತ್ತಿಗೆ ಆಧಾರದ ಮೇಲೆ ಕಳೆದ ಐದು ವರ್ಷಗಳಿಂದ ಈತ ಪ್ರತಿಮಾ ಅವರ ಕಾರು ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ. ಪ್ರತಿಮಾ ಅವರು ದಾಳಿ ನಡೆಸಲು ತೆರಳುತ್ತಿದ್ದ ವ್ಯಕ್ತಿಗಳ ಕುರಿತ ಮಾಹಿತಿಯನ್ನು ಸೋರಿಕೆ ಮಾಡುತ್ತಿದ್ದ ವಿಷಯ ಗಮನಕ್ಕೆ ಬಂದ ನಂತರ ಕಾರು ಚಾಲಕ ಕಿರಣ್ ಎಂಬಾತನನ್ನು ಕೆಲಸದಿಂದ ವಜಾ ಮಾಡಿದ್ದರು.
ಕೆಲಸದಿಂದ ವಜಾ ಮಾಡಿದ್ದಕ್ಕೆ ಪ್ರತೀಕಾರವಾಗಿ ಪ್ರತಿಮಾ ಅವರನ್ನು ಹತ್ಯೆ ಮಾಡಿರುವುದಾಗಿ ತನಿಖೆ ವೇಳೆ ಚಾಲಕ ಕಿರಣ್ ತಪ್ಪೊಪ್ಪಿಕೊಂಡಿರುವುದಾಗಿ ವರದಿ ವಿವರಿಸಿದೆ. ಘಟನೆ ನಂತರ ಕಿರಣ್ ಚಾಮರಾಜನಗರಕ್ಕೆ ಪರಾರಿಯಾಗಿದ್ದ ಎಂದು ವರದಿ ಹೇಳಿದೆ.
ಪ್ರತಿಮಾ ಅವರು ಶನಿವಾರ ರಾತ್ರಿ 8ರ ಸುಮಾರಿಗೆ ಕಾರು ಚಾಲಕ ಸಚಿನ್ ದೊಡ್ಡಸಂದ್ರದಲ್ಲಿರುವ ಮನೆಗೆ ಬಿಟ್ಟು ತೆರಳಿದ್ದರು. ಪ್ರತಿಮಾ ಅವರು ಮನೆ ಬಾಗಿಲು ತೆರೆದು ಒಳ ಹೋಗುತ್ತಿದ್ದಂತೆಯೇ ಹಿಂದಿನಿಂದ ದಾಳಿ ನಡೆಸಿ ಉಸಿರುಗಟ್ಟಿಸಿ, ನಂತರ ಮಾರಕಾಸ್ತ್ರದಿಂದ ಕತ್ತು ಸೀಳಿ ಕೊಲೆಗೈಯಲಾಗಿತ್ತು.
ಅಂದು ರಾತ್ರಿ ಪ್ರತಿಮಾ ಅವರ ಸಹೋದರ ಪ್ರತೀಶ್ ಹತ್ತಾರು ಬಾರಿ ಮೊಬೈಲ್ ಗೆ ಕರೆ ಮಾಡಿದ್ದರು. ಆದರೆ ಆಕೆ ಕರೆ ಸ್ವೀಕರಿಸಿರಲಿಲ್ಲವಾಗಿತ್ತು. ರವಿವಾರ ಬೆಳಗ್ಗೆ ಮತ್ತೆ ಕರೆ ಮಾಡಿದಾಗಲೂ ಪ್ರತಿಕ್ರಿಯೆ ಬಂದಿಲ್ಲವಾಗಿತ್ತು. ಇದರಿಂದ ಆತಂಕಗೊಂಡ ಪ್ರತೀಶ್ ಸಹೋದರಿಯ ಮನೆಗೆ ಬಂದಿದ್ದು, ಮನೆ ಬಾಗಿಲು ತೆರೆದಿರುವುದನ್ನು ಕಂಡು ಗಾಬರಿಯಾಗಿ ಒಳ ಹೋಗಿ ನೋಡಿದಾಗ ಬೆಡ್ ರೂಂನಲ್ಲಿ ಪ್ರತಿಮಾ ರಕ್ತದ ಮಡುವಿನಲ್ಲಿ ಬಿದ್ದಿದ್ದು ಕಂಡು ಬಂದಿತ್ತು. ನಂತರ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು.