ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಟೂರ್ನಿಯ 35ನೇ ಪಂದ್ಯದಲ್ಲಿ ಮಳೆ ಕಾರಣದಿಂದಾಗಿ ನ್ಯೂಜಿಲೆಂಡ್ ವಿರುದ್ಧ ಪಾಕಿಸ್ತಾನ 21 ರನ್‌ಗಳ ಜಯಗಳಿಸಿದೆ. ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ್ದರಿಂದ ಡಕ್‌ವರ್ತ್ ನಿಯಮದ ಪ್ರಕಾರ ಪಾಕಿಸ್ತಾನ ಗೆಲುವು ದಾಖಲಿಸಿದೆ.
ಆರಂಭದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 401 ರನ್ ಬಾರಿಸಿತ್ತು. ಆ ಮೂಲಕ ಪಾಕಿಸ್ತಾನಕ್ಕೆ ಸವಾಲಿನ 402 ರನ್‌ಗಳ ಗುರಿ ನೀಡಿತ್ತು. ಗುರಿ ಬೆನ್ನತ್ತಿದ ಪಾಕಿಸ್ತಾನ ಆರಂಭಿಕ ಆಘಾತ ಎದುರಿಸಿತು. ಅಬ್ದುಲ್ಲಾ ಶಫೀಕ್ ಕೇವಲ 4 ರನ್‌ಗಳಿಗೆ ಔಟಾದರು. ನಂತರ ಬಂದ ಫಖರ್ ಜಮಾನ್ (81 ಬಾಲ್, 126 ರನ್, 11 ಸಿಕ್ಸರ್, 8 ಫೋರ್) ಹಾಗೂ ಬಾಬರ್ ಆಜಾಮ್ (63 ಬಾಲ್, 66 ರನ್, 2 ಸಿಕ್ಸರ್, 6 ಫೋರ್) ಉತ್ತಮ ಜೊತೆಯಾಟವಾಡಿ ಮಿಂಚಿದರು.
141 ಬಾಲ್‌ಗಳಿಗೆ 194 ರನ್ ಬಾರಿಸುವ ಮೂಲಕ ಉತ್ತಮ ಜೊತೆಯಾಟ ನೀಡಿ ಪಾಕ್ ಗೆಲುವಿಗೆ ಭರವಸೆ ಮೂಡಿಸಿದ್ದರು. ಪಾಕ್ ಬ್ಯಾಟರ್‌ಗಳ ಉತ್ತಮ ಪ್ರದರ್ಶನಕ್ಕೆ ಮಳೆ ಎರಡು ಬಾರಿ ಅಡ್ಡಿಪಡಿಸಿತು. ಮೊದಲ ಬಾರಿಗೆ ಮಳೆ ಬಂದಾಗ, ಡಿಎಲ್‌ಎಸ್ ನಿಯಮದ ಪ್ರಕಾರ ಪಾಕ್‌ಗೆ 41 ಓವರ್‌ಗಳಿಗೆ 342 ರನ್ ಗುರಿ ನೀಡಲಾಯಿತು. ಇದೀಗ ಎರಡನೇ ಸಲ ಮಳೆ ಬಂದು ಪಂದ್ಯ ನಿಂತ ವೇಳೆಗೆ ಪಾಕಿಸ್ತಾನ ತಂಡ, 25.3 ಓವರ್‌ಗಳಿಗೆ ಒಂದು ವಿಕೆಟ್ ನಷ್ಟಕ್ಕೆ 200 ರನ್ ಗಳಿಸಿತು. ಪಾಕ್ ಗೆಲ್ಲಲು ಇನ್ನೂ 93 ಎಸೆತಗಳಲ್ಲಿ 143 ರನ್ ಗಳಿಸಬೇಕಾಗಿತ್ತು. ಮಳೆ ನಿಲ್ಲದ ಕಾರಣ, ಪಾಕಿಸ್ತಾನ ತಂಡ ಡಿಎಲ್‌ಎಸ್ ನಿಯಮದ ಪ್ರಕಾರ ನ್ಯೂಜಿಲೆಂಡ್ ತಂಡಕ್ಕಿಂತ 21 ರನ್‌ಗಳ ಮುಂದಿತ್ತು. ಹೀಗಾಗಿ 21 ರನ್‌ಗಳ ಜಯ ಸಾಧಿಸಿದೆ.
ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 401 ರನ್ ಬಾರಿಸಿತ್ತು. 68 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿದ್ದ ಕಿವೀಸ್ ಬಳಿಕ 2ನೇ ವಿಕೆಟ್‌ಗೆ ಬೃಹತ್ ಮೊತ್ತ ಪೇರಿಸಿತು. ಸ್ಫೋಟಕ ಇನ್ನಿಂಗ್ಸ್ ಆರಂಭಿಸಿದ ಕೇನ್ ವಿಲಿಯಮ್ಸನ್ ಹಾಗೂ ರಚಿನ್ ರವೀಂದ್ರ ಜೋಡಿ 2ನೇ ವಿಕೆಟ್‌ಗೆ 142 ಎಸೆತಗಳಲ್ಲಿ ಬರೋಬ್ಬರಿ 180 ರನ್ ಬಾರಿಸಿತ್ತು.
ರಚಿನ್ ರವೀಂದ್ರ 108 ರನ್ (94 ಎಸೆತ, 15 ಬೌಂಡರಿ, 1 ಸಿಕ್ಸರ್) ಚಚ್ಚುವ ಮೂಲಕ 23ನೇ ವಯಸ್ಸಿಗೆ ವಿಶ್ವಕಪ್‌ನಲ್ಲಿ 3 ಶತಕ ಸಿಡಿಸಿ, 2 ಶತಕ ಸಿಡಿಸಿದ್ದ ಸಚಿನ್ ತೆಂಡೂಲ್ಕರ್ ದಾಖಲೆ ನುಚ್ಚು ನೂರು ಮಾಡಿದರು. ಇದರೊಂದಿಗೆ ಮೊಣಕಾಲು ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡ ನಂತರ ಮೊದಲ ಪಂದ್ಯವಾಡಿದ ಕೇನ್ ವಿಲಿಯಮ್ಸನ್ 95 ರನ್ (79 ಎಸೆತ, 10 ಬೌಂಡರಿ, 2 ಸಿಕ್ಸರ್) ಸಿಡಿಸಿ ಮಿಂಚಿದರು. ಜೊತೆಗೆ ಮಧ್ಯಮ ಕ್ರಮಾಂಕದಲ್ಲಿ ಡೇರಿಲ್ ಮಿಚೆಲ್ ಹಾಗೂ ಮಾರ್ಕ್ ಚಾಪ್ಮನ್ ಜೋಡಿ 32 ಎಸೆತಗಳಲ್ಲಿ 57 ರನ್, ಮಿಚೆಲ್ ಸ್ಯಾಂಟ್ನರ್ ಮತ್ತು ಗ್ಲೇನ್ ಫಿಲಿಪ್ಸ್ ಜೋಡಿ 26 ಎಸೆತಗಳಲ್ಲಿ 43 ರನ್‌ಗಳ ಜೊತೆಯಾಟ ನೀಡುವ ಮೂಲಕ ತಂಡದ ಮೊತ್ತ 400 ರನ್ ಗಡಿದಾಟಿಸುವಲ್ಲಿ ಯಶಸ್ವಿಯಾದರು.