ಲಕ್ನೋ: ಅಫ್ಘಾನಿಸ್ತಾನ ತಂಡ ನೆದರ್ಲೆಂಡ್ಸ್ ವಿರುದ್ಧ 7 ವಿಕೆಟ್ಗಳ ಗೆಲುವು ಸಾಧಿಸಿ ಸೆಮಿಫೈನಲ್ ಸನಿಹಕ್ಕೆ ಬಂದು ನಿಂತಿದೆ.
ಲಕ್ನೋದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ನೆದರ್ಲೆಂಡ್ಸ್ 46.3 ಓವರ್ಗಳಲ್ಲಿ ಕೇವಲ 179 ರನ್ಗಳಿಸಿ ಸರ್ವಪತನ ಕಂಡಿತು. ಸುಲಭ ಗುರಿ ಬೆನ್ನಟ್ಟಿದ ಅಫ್ಘಾನಿಸ್ತಾನ ಆರಂಭಿಕ ಆಘಾತ ಕಂಡರೂ ಆ ಬಳಿಕ ಚೇತರಿಕೆ ಕಂಡು 31.3 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 181 ರನ್ ಬಾರಿಸಿ ಜಯಭೇರಿ ಮೊಳಗಿಸಿತು.
ಚೇಸಿಂಗ್ ವೇಳೆ ಅಫ್ಘಾನ್ ತಂಡ ಆರಂಭಿಕರಾದ ರಹಮಾನುಲ್ಲಾ ಗುರ್ಬಾಜ್(10) ಮತ್ತು ಇಬ್ರಾಹಿಂ ಜದ್ರಾನ್(20) ಅವರ ವಿಕೆಟ್ ಬೇಗನೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ ಆ ಬಳಿಕ ಕ್ರೀಸ್ಗಿಳಿದ ರಹಮತ್ ಶಾ ಮತ್ತು ನಾಯಕ ಹಶ್ಮತುಲ್ಲಾ ಶಾಹಿದಿ ಉತ್ತಮ ಇನಿಂಗ್ಸ್ ಕಟ್ಟಿ ತಂಡಕ್ಕೆ ಆಸರೆಯಾದರು. ಇದೇ ವೇಳೆ ರಹಮತ್ ಶಾ ಅವರು 47 ಎಸೆತಗಳಿಂದ ಅರ್ಧಶತಕ ಪೂರ್ತಿಗೊಳಿಸಿದರು.
ಅರ್ಧಶತಕ ಬಾರಿಸಿ 2 ರನ್ ಗಳಿಸಿಸುವ ವೇಳೆ ರಹಮತ್ ಶಾ ವಿಕೆಟ್ ಕೈಚೆಲ್ಲಿದರು. ಒಟ್ಟು 54 ಎಸೆತ ಎದುರಿಸಿದ ಅವರು 8 ಬೌಂಡರಿ ಚಚ್ಚಿ 52 ರನ್ ಗಳಿಸಿದರು. ಮೂರನೇ ವಿಕೆಟ್ಗೆ ಶಾಹಿದಿ ಜತೆ ಅತ್ಯಮೂಲ್ಯ 74 ರನ್ಗಳನ್ನು ಒಟ್ಟುಗೂಡಿಸಿದರು. ಈ ವಿಕೆಟ್ ಪತನ ಬಳಿಕ ನಾಯಕ ಹಶ್ಮತುಲ್ಲಾ ಅಜೇಯ ಅರ್ಧಶತಕ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಇವರಿಗೆ ಅಜ್ಮತುಲ್ಲಾ ಒಮರ್ಜಾಯ್ ಉತ್ತಮ ಸಾಥ್ ನೀಡಿದರು. ಒಮರ್ಜಾಯ್ 31 ರನ್ ಬಾರಿಸಿ ಅಜೇಯರಾಗಿ ಉಳಿದರು. ಹಶ್ಮತುಲ್ಲಾ 64 ಎಸೆತಗಳಿಂದ ಅಜೇಯ 56 ರನ್ ಬಾರಿಸಿದರು.
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ನೆದರ್ಲೆಂಡ್ಸ್, ಆರಂಭಿಕ ಹಂತದಲ್ಲಿ 50 ಒಳಗಡೆ 5 ವಿಕೆಟ್ ಕಳೆದುಕೊಂಡರೂ ಆ ಬಳಿಕ ಬರುವ ನಾಯಕ ಸ್ಕಾಟ್ ಎಡ್ವರ್ಡ್ಸ್ ಮತ್ತು 7ನೇ ಕ್ರಮಾಂಕದಲ್ಲಿ ಆಡಲಿಳಿಯುವ ವ್ಯಾನ್ ಡೆರ್ ಮೆರ್ವೆ ಸೇರಿಕೊಂಡು ಬೃಹತ್ ಮೊತ್ತದ ಜತೆಯಾಟ ನಡೆಸುವ ಮೂಲಕ ತಂಡಕ್ಕೆ ನೆರವಾಗುತ್ತಿದ್ದರು. ಆದರೆ ಈ ಪಂದ್ಯದಲ್ಲಿ ಉಭಯ ಆಟಗಾರರು ಬೇಗನೆ ವಿಕೆಟ್ ಕಳೆದುಕೊಂಡರು.
ಮ್ಯಾಕ್ಸ್ ಓ ಡೌಡ್ 40 ಎಸೆತ ಎದುರಿಸಿ 9 ಬೌಂಡರಿ ನೆರವಿನಿಂದ 42 ರನ್ ಗಳಿಸಿದರು. ಸೈಬ್ರಾಂಡ್ ಎಂಗಲ್‌ಬ್ರೆಕ್ಟ್ ಅವರು 6 ಬೌಂಡರಿ ನೆರವಿನಿಂದ 58 ರನ್ ಬಾರಿಸಿ ಅರ್ಧಶತಕ ಪೂರ್ತಿಗೊಳಿಸಿದರು. ಅಕರ್ಮನ್ 29 ರನ್ ಗಳಿಸಿ ಸಣ್ಣ ಕೊಡುಗೆ ಸಲ್ಲಿಸಿದರು. ನೆದರ್ಲೆಂಡ್ಸ್ ಬ್ಯಾಟಿಂಗ್ ಇನಿಂಗ್ಸ್ನಲ್ಲಿ ಕನಿಷ್ಠ ಒಂದು ಸಿಕ್ಸರ್ ಕೂಡ ದಾಖಲಾಗಲಿಲ್ಲ. ಅಫ್ಘಾನ್ ಪರ ಅನುಭವಿ ಮತ್ತು ಹಿರಿಯ ಸ್ಪಿನ್ನರ್ ಮೊಹಮ್ಮದ್ ನಬಿ ಒಂದು ಮೇಡನ್ 28 ರನ್ ವೆಚ್ಚದಲ್ಲಿ 3 ವಿಕೆಟ್ ಕಿತ್ತರು. ನೂರ್ ಅಹ್ಮದ್ 31 ರನ್ಗೆ 2 ವಿಕೆಟ್ ಪಡೆದರು. ರಶೀದ್ ಖಾನ್ 10 ಓವರ್ ಬೌಲಿಂಗ್ ನಡೆಸಿದರೂ ವಿಕೆಟ್ ಲೆಸ್ ಎನಿಸಿಕೊಂಡರು.