ಮಡಿಕೇರಿ: ಕಟ್ಟಡ ಕಾಮಗಾರಿ ನಡೆಸುತ್ತಿದ್ದ ಸಂದರ್ಭ ಗುಡ್ಡ ಕುಸಿತ ಉಂಟಾಗಿ ಮೃತಪಟ್ಟ 3 ಕೂಲಿ ಕಾರ್ಮಿಕರು

By: Ommnews

Date:

Share post:

ಮಡಿಕೇರಿ: ಮಡಿಕೇರಿ ನಗರದ ಸ್ಟೀವರ್ಟ್ ಹಿಲ್ ಬಡಾವಣೆಯಲ್ಲಿ ಕಟ್ಟಡ ಕಾಮಗಾರಿ ನಡೆಸುತ್ತಿದ್ದ ಸಂದರ್ಭ ಗುಡ್ಡ ಕುಸಿದ ಪರಿಣಾಮ ಮೂವರು ಕೂಲಿ ಕಾರ್ಮಿಕರು ಮಣ್ಣಿನಡಿ ಸಿಲುಕಿ ಮೃತಪಟ್ಟಿರುವ ಘಟನೆ ನಡೆದಿದೆ.

Advertisement
Advertisement
Advertisement

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನಿವಾಸಿಗಳಾದ ಬಸಪ್ಪ, ನಿಂಗಪ್ಪ ಹಾಗೂ ಆನಂದ ಮೃತ ದುರ್ದೈವಿಗಳು.

ವ್ಯಕ್ತಿಯೊಬ್ಬರ ಜಾಗದಲ್ಲಿ ತಡೆಗೋಡೆ ನಿರ್ಮಾಣಕ್ಕೆ ಮಣ್ಣು ತೆಗೆಯುತ್ತಿದ್ದ ಸಂದರ್ಭ ಗುಡ್ಡ ಕುಸಿದಿದೆ. ಈ ಘಟನೆಯಿಂದ ಐವರು ಕೆಲಸ ಮಾಡುವ ಸಂದರ್ಭ ನಾಲ್ವರು ಕಾರ್ಮಿಕರು ಮಣ್ಣಿನಡಿ ಸಿಲುಕಿದ್ದರು. ಅದೃಷ್ಟವಶಾತ್ ಕಾರ್ಮಿಕ ರಾಜು ಇತರ ಕಾರ್ಮಿಕರ ಸಹಕಾರದಿಂದ ಮೇಲೆ ಬಂದು ಜೀವ ಉಳಿಸಿಕೊಂಡಿದ್ದಾರೆ. ಉಳಿದ ಮೂವರು ಮಣ್ಣಿನಡಿ ಸಿಲುಕಿಕೊಂಡ ಪರಿಣಾಮ ಮೇಲೆ ಬರಲಾಗದೆ ಪ್ರಾಣ ಕಳೆದುಕೊಂಡಿದ್ದಾರೆ.

ದುರ್ಘಟನೆ ವೇಳೆ ಸುಮಾರು 8 ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದರು. ಘಟನೆ ನಡೆದ ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ಮೇಲಕ್ಕೆತ್ತಿ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ. ಘಟನಾ ಸ್ಥಳಕ್ಕೆ ಕೊಡಗು ಎಸ್‌ಪಿ ರಾಮರಾಜನ್, ಮಡಿಕೇರಿ ಶಾಸಕ ಮಂಥರ್ ಗೌಡ, ಜಿಲ್ಲಾಧಿಕಾರಿ ವೆಂಕಟರಾಜು ಸ್ಥಳ ಪರಿಶೀಲನೆ ನಡೆಸಿದರು.

ಬಳಿಕ ಮಾತಾನಾಡಿದ ಎಸ್‌ಪಿ ರಾಮರಾಜನ್, ಇಂದು 15 ಅಡ್ಡಿ ಎತ್ತರದ ತಡೆಗೋಡೆ ಕಾಮಗಾರಿ ಮಾಡುವ ಸಂದರ್ಭದಲ್ಲಿ ಗುಡ್ಡ ಕುಸಿದು, ಕಾರ್ಮಿಕರ ಮೇಲೆ ಬಿದ್ದಿದೆ. ಅದರಲ್ಲಿ 4 ಜನರ ಮೇಲೆ ಮಣ್ಣು ಬಿದ್ದಿದೆ. ಒಬ್ಬರನ್ನು ಅಲ್ಲಿನ ಸಿಬ್ಬಂದಿಯೇ ರಕ್ಷಣೆ ಮಾಡಿದ್ದಾರೆ. ಉಳಿದ ಮೂವರು 1 ಗಂಟೆ ಕಾಲ ಮಣ್ಣಿನಡಿ ಸಿಲುಕಿದ್ದರು. ಅವರನ್ನು ರಕ್ಷಿಸಲು ಎಲ್ಲರೂ ನಿರಂತರವಾಗಿ ಶ್ರಮಿಸಿದರು ಎಂದು ಹೇಳಿದರು.

ಈ ಘಟನೆಗೆ ಇಲ್ಲಿ ಮೊದಲೇ ಸಡಿಲವಾಗಿ ಮಣ್ಣ ಹಾಕಿದ್ದರು ಎನ್ನಲಾಗಿದೆ. ನೋಡುವುದಕ್ಕೆ ಯಾರಿಗೂ ತಿಳಿಯುವುದಿಲ್ಲ. ಈ ಕಾಮಗಾರಿ ಮಾಡಲು ಪರ್ಮಿಷನ್ ತೆಗೆದುಕೊಂಡಿದ್ದಾರೋ ಇಲ್ಲವೋ ಅನ್ನೊಂದು ಇನ್ನಷ್ಟೇ ಮಾಹಿತಿ ಕಲೆ ಹಾಕಬೇಕಿದೆ. ಇದು ಮನೆಯ ಮಾಲೀಕನ ನಿರ್ಲಕ್ಷ್ಯದಿಂದ ಆಗಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಅವರ ಮೇಲೆ ಕಾನೂನು ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share post:

LEAVE A REPLY

Please enter your comment!
Please enter your name here