ಪುತ್ತೂರು: ಬಲ್ನಾಡಿನ ನೂಜಿ ನಿವಾಸಿ ಪೆರುವೋಡಿ ನಾರಾಯಣ ಭಟ್ (96 ವ) ಮಂಗಳವಾರ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಪೆರುವೋಡಿ ನಾರಾಯಣ ಭಟ್ ಅವರು ಯಕ್ಷಗಾನದಲ್ಲಿ ಹಾಸ್ಯದ ಪಾತ್ರದಲ್ಲಿ ಅಭಿಮಾನಿಗಳ ಮನಸೆಳೆದು ಮನೆಮಾತಾಗಿದ್ದರು.
ಪ್ರಸಿಧ್ಧ ಧರ್ಮಸ್ಥಳ ಮೇಳವು ಸೇರಿ, ಹಲವಾರು ಮೇಳಗಳಲ್ಲಿ ಕಲಾವಿದನಾಗಿ ಪ್ರೇಕ್ಷಕರ ಮನಗೆದ್ದ ಪೆರುವೋಡಿ ನಾರಾಯಣ ಭಟ್ಟರು ‘ಪಾಪಣ್ಣ ಭಟ್ರು’ ಎಂದೇ ಖ್ಯಾತಿ ಪಡೆದವರು.
ಯಕ್ಷಗಾನದ ಹಾಸ್ಯ ಪಾತ್ರಗಳಿಗೆ ವಿಶೇಷ ಮಾನ, ಮಾನ್ಯತೆ ತಂದುಕೊಟ್ಟ ಹೆಗ್ಗಳಿಕೆ ಇವರದು.
ಪೌರಾಣಿಕ ಪ್ರಸಂಗದ ಬಹುತೇಕ ಎಲ್ಲಾ ಪಾತ್ರಗಳಲ್ಲೂ ಸ್ವಂತಿಕೆಯ ಮೇಲ್ಮೆ ಅವರದಾಗಿದ್ದು, ತುಳು ಪ್ರಸಂಗಗಳಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿದ್ದರು.
ಇವರ ಸಾಧನೆಗಾಗಿ ಹಲವು ಪ್ರಶಸ್ತಿಗಳು ಇವರನ್ನು ಹುಡುಕಿಕೊಂಡು ಬಂದಿತ್ತು.
ಪೆರುವೋಡಿ ನಾರಾಯಣ ಭಟ್ ಅವರ ನಿಧನಕ್ಕೆ ಯಕ್ಷಗಾನ ರಂಗದ ಕಲಾವಿದರು ಹಾಗೂ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.