ನವದೆಹಲಿ: ನವದೆಹಲಿಯಲ್ಲಿ ನಡೆದ ವಿಶ್ವಕಪ್ 2023 ಟೂರ್ನಿಯ ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾ ಎರಡು ದಾಖಲೆ ಬರೆದಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಆಸ್ಟ್ರೇಲಿಯಾ, ನೆದರ್ಲೆಂಡ್ಸ್‌ಗೆ 400 ರನ್‌ಗಳ ಬೃಹತ್ ಮೊತ್ತದ ಗುರಿ ನೀಡಿತ್ತು. ಡೇವಿಡ್ ವಾರ್ನರ್, ಮ್ಯಾಕ್ಸ್‌ವೆಲ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಸವಾಲಿನ ಆಸ್ಟ್ರೇಲಿಯಾ ಸವಾಲಿನ ಮೊತ್ತ ಪೇರಿಸಿತ್ತು. ಗುರಿ ಬೆನ್ನತ್ತಿದ ನೆದರ್ಲೆಂಡ್ಸ್ ತಂಡ 21 ಓವರ್‌ಗಳಲ್ಲೇ ತನ್ನೆಲ್ಲ ವಿಕೆಟ್ ಕಳೆದುಕೊಂಡು ಕೇವಲ 90 ರನ್ ಗಳಿಸಿ ಹೀನಾಯ ಸೋಲು ಕಂಡಿತು.
ಆಸೀಸ್ ಬೌಲರ್‌ಗಳ ದಾಳಿಗೆ ನಲುಗಿದ ನೆದರ್ಲೆಂಡ್ಸ್ ಬ್ಯಾಟರ್‌ಗಳು ಆರಂಭದಿಂದ ಕೊನೆವರೆಗೂ ಪೆವಿಲಿಯನ್ ಪರೇಡ್ ನಡೆಸಿದರು. ವಿಕ್ರಮಜಿತ್ ಸಿಂಗ್ (25), ಮ್ಯಾಕ್ಸ್ ಒ’ಡೌಡ್ (6), ಕಾಲಿನ್ ಅಕರ್ಮನ್ (10), ಸೈಬ್ರಾಂಡ್ ಎಂಗಲ್‌ಬ್ರೆಕ್ಟ್ (11), ಬಾಸ್ ಡಿ ಲೀಡೆ (4), ಸ್ಕಾಟ್ ಎಡ್ವರ್ಡ್ಸ್ (ಔಟಾಗದೆ 12), ತೇಜ ನಿಡಮನೂರು (12), ಲೋಗನ್ ವ್ಯಾನ್ ಬೀಕ್ (0), ರೋಲೋಫ್ ವ್ಯಾನ್ ಡೆರ್ ಮೆರ್ವೆ (0), ಆರ್ಯನ್ ದತ್ (1), ಪಾಲ್ ವ್ಯಾನ್ ಮೀಕೆರೆನ್ (0) ರನ್‌ಗಳಿಗೆ ಔಟಾದರು.
ಬೌಲಿಂಗ್‌ನಲ್ಲಿ ಫಾರ್ಮ್‌ನಲ್ಲಿರುವ ಆಡಮ್ ಝಂಪಾ ಉತ್ತಮ ಪ್ರದರ್ಶನ ನೀಡಿದರು. ಆಸೀಸ್ ಪರವಾಗಿ 4 ವಿಕೆಟ್ ಪಡೆದು ಮಿಂಚಿದರು. ಮಿಚೆಲ್ ಮಾರ್ಷ್ 2 ಹಾಗೂ ಪ್ಯಾಟ್ ಕಮ್ಮಿನ್ಸ್, ಜೋಶ್ ಹ್ಯಾಜಲ್ವುಡ್, ಮಿಚೆಲ್ ಸ್ಟಾರ್ಕ್ ತಲಾ ಒಂದೊಂದು ವಿಕೆಟ್ ಪಡೆದರು.
ಆಸ್ಟ್ರೇಲಿಯಾ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 399 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ತಂಡದ ಪರವಾಗಿ ಡೇವಿಡ್ ವಾರ್ನರ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಶತಕ ಸಿಡಿಸಿ ಮಿಂಚಿದರು. ಅಬ್ಬರದ ಬ್ಯಾಟಿಂಗ್ ನಡೆಸಿದ ಡೇವಿಡ್ ವಾರ್ನರ್ 93 ಬಾಲ್‌ಗಳಿಗೆ 104 ರನ್ (11 ಫೋರ್, 3 ಸಿಕ್ಸರ್) ಬಾರಿಸಿದರು. ಗ್ಲೆನ್ ಮ್ಯಾಕ್ಸ್‌ವೆಲ್ 44 ಬಾಲ್‌ಗಳಿಗೆ 106 ರನ್ ಸಿಡಿಸಿ (9 ಫೋರ್, 8 ಸಿಕ್ಸರ್) ಸಿಡಿಸಿ ಮಿಂಚಿದರು.