ನವದೆಹಲಿ: ಗಾಜಾ ಪಟ್ಟಿ ಪ್ರದೇಶದ ಅಲ್ ಅಹ್ಲಿ ಆಸ್ಪತ್ರೆಯಲ್ಲಿ ನಡೆದ ದುರ್ಘಟನೆಯಲ್ಲಿ 500ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ, ಗುರುವಾರ ಪ್ಯಾಲೆಸ್ತೀನ್ ಅಧ್ಯಕ್ಷ ಮಹಮ್ಮದ್ ಅಬ್ಬಾಸಿ ಅವರಿಗೆ ದೂರವಾಣಿ ಕರೆ ಮಾಡಿ ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟರ್‌ನಲ್ಲಿ ಮಾಹಿತಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ‘ಪ್ಯಾಲೆಸ್ತೀನ್ ಅಧ್ಯಕ್ಷ ಮೊಹಮ್ಮದ್ ಅಬ್ಬಾಸಿ ಅವರೊಂದಿಗೆ ಇಂದು ಮಾತುಕತೆ ನಡೆಸಿದೆ. ಈ ವೇಳೆ ಅಲ್ ಅಹ್ಲಿ ಆಸ್ಪತ್ರೆ ದುರಂತದಲ್ಲಿ ಅಮಾಯಕರ ನಾಗರಿಕರ ಕುರಿತು ತೀವ್ರ ಸಂತಾಪ ವ್ಯಕ್ತಪಡಿಸಿದೆ. ಜೊತೆಗೆ ಪ್ಯಾಲೆಸ್ತೀನಿ ಜನರಿಗೆ ಎಲ್ಲಾ ರೀತಿಯ ಮಾನವೀಯ ನೆರವುಗಳನ್ನು ಮುಂದುವರೆಸುವ ಭರವಸೆಯನ್ನು ನೀಡಿದ್ದೇನೆ. ಅಲ್ಲದೆ ಆ ಪ್ರದೇಶದಲ್ಲಿ ತಲೆದೋರಿರುವ ಭಯೋತ್ಪಾದನೆ, ಹಿಂಸಾಚಾರ ಮತ್ತು ಭದ್ರತಾ ಪರಿಸ್ಥಿತಿ ಕುಸಿಯುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಜೊತೆಗೆ ಇಸ್ರೇಲ್- ಪ್ಯಾಲೆಸ್ತೀನ್ ವಿಷಯದಲ್ಲಿ ಸುದೀರ್ಘ ಕಾಲದಿಂದ ಹೊಂದಿರುವ ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ತಿಳಿಸಲಾಯಿತು’ ಎಂದು ಮಾಹಿತಿ ನೀಡಿದ್ದಾರೆ.