ಮಂಗಳೂರು: ಕಾಂಗ್ರೆಸ್ ಸರಕಾರ ಕಮಿಷನ್ ದಂಧೆಯಲ್ಲಿ ತೊಡಗಿಕೊಂಡಿದ್ದು ಕಾಂಗ್ರೆಸಿಗರ ಮನೆಯಲ್ಲಿ ಕೋಟಿ ಕೋಟಿ ರೂಪಾಯಿ ಪತ್ತೆಯಾಗುತ್ತಿದ್ದು, ಕಾಂಗ್ರೆಸ್ ಬಣ್ಣ ಬಯಲಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಕಿಡಿ ಕಾರಿದ್ದಾರೆ.
ನಗರದಲ್ಲಿ ಸೋಮವಾರ ರಾಜ್ಯ ಸರಕಾರದ ವಿರುದ್ದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿ, ಬಿಜೆಪಿ ಆಡಳಿತವಿದ್ದಾಗ ಆಧಾರ ರಹಿತ ಆರೋಪ ಮಾಡಿದ್ದ ಕಾಂಗ್ರೆಸಿಗರು ಇಂದು ಸಾಕ್ಷ್ಯ ಸಮೇತ ಸಿಕ್ಕಿಬೀಳುತ್ತಿದ್ದಾರೆ.
ಸುಳ್ಳು ಗ್ಯಾರಂಟಿ , ಸುಳ್ಳು ಆರೋಪಗಳನ್ನು ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಇಂದು ಗುತ್ತಿಗೆ, ವರ್ಗಾವಣೆಯಲ್ಲಿ ಭ್ರಷ್ಟಾಚಾರ ಮಾಡುತ್ತಿದೆ. ಪಂಚರಾಜ್ಯ ಚುನಾವಣೆಯ ವೆಚ್ಚಕ್ಕೆ ಕಾಂಗ್ರೆಸ್ ಕರ್ನಾಟಕವನ್ನು ಎಟಿಎಂ ಆಗಿ ಬಳಸುತ್ತಿದೆ . ಭ್ರಷ್ಟಾಚಾರಕ್ಕೆ ಸಿಎಂ, ಡಿಸಿಎಂ ಹೊಣೆಯಾಗಿದ್ದು ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ವಿಧಾನಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ ಮೊದಲಾದವರು ಪಾಲ್ಗೊಂಡಿದ್ದರು.