ಮಂಗಳೂರು : ಮುಂದಿನ ಐದಾರು ತಿಂಗಳಲ್ಲಿ ಹಿಂದೂಗಳನ್ನು ಜಾತಿಯ ಮೂಲಕ ಒಡೆಯುವ ಕೆಲಸ ಆಗಬಹುದು ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕದ್ರಿ ಮೈದಾನದಲ್ಲಿ ನಡೆದ ವಿಎಚ್ಪಿ ಶೌರ್ಯ ಜಾಗರಣ ಯಾತ್ರೆಯಲ್ಲಿ ಭಾಷಣ ಮಾಡಿದ ಅವರು, ಜಾತಿ ಗಣತಿ ಮೂಲಕ ಹಿಂದೂಗಳನ್ನ ಒಡೆಯುವ ಕೆಲಸ ಆಗುತ್ತಿದೆ. ಜಾತಿ ಜಣಗತಿ ವರದಿ ಬಿಡುಗಡೆ ಮಾಡುವವರು ಮುಸಲ್ಮಾನರ ಜಾತಿ ಕೇಳುವ ಕೆಲಸ ಮಾಡುತ್ತಾರಾ? ಸುನ್ನಿ, ಶಿಯಾ ಅನ್ನೋ ಜಾತಿ ವಿಭಜನೆ ಕೆಲಸ ಆಗಲ್ಲ. ಹಾಗಾಗಿ ಸಮಸ್ತ ಹಿಂದೂಗಳು ಈ ವಿಚಾರದಲ್ಲಿ ಎಚ್ಚೆತ್ತುಕೊಳ್ಳಬೇಕಿದೆ ಎಂದರು.
ಭಾರತಕ್ಕೆ ಇವತ್ತು ಮೂರು ಕಡೆಗಳಿಂದ ಆಕ್ರಮಣವಾಗುತ್ತಿದೆ. ಕ್ರೈಸ್ತರು ಹಿಂದೂಗಳನ್ನು ಜಾತಿಯ ಮೂಲಕ ವಿಭಜಿಸಿದರು. ಅಂದು ಬ್ರಿಟಿಷರು ಹಿಂದೂಗಳನ್ನು ಒಡೆದು ಇವತ್ತು ರಾಜಕೀಯ ಪಕ್ಷಗಳು ಮಾಡುತ್ತಿದೆ. ಮುಸ್ಲಿಮರ ಜಾತಿಯನ್ನೂ ಯಾರಾದರೂ ಕೇಳಿದ್ದಾರಾ ಎಂದು ಪ್ರಶ್ನಿಸಿದರು.
ಕೆಲವು ಅಯೋಗ್ಯರು ವಿಜಯ ದಶಮಿ ದಿನ ಮಹಿಷಾ ದಸರಾ ಮಾಡಲು ಹೊರಟಿದ್ದಾರೆ. ಸಂಸ್ಕೃತಿಯ ಆಧಾರದಲ್ಲಿ ನಮ್ಮನ್ನ ಒಡೆಯುವ ಕೆಲಸ ಆಗುತ್ತಿದೆ. ಹಿಂದಿ ಉತ್ತರ ಭಾರತ, ಕನ್ನಡ ದಕ್ಷಿಣ ಭಾರತ ಅಂತಾ ಬ್ರಿಟಿಷರು ನಮ್ಮನ್ನು ಒಡೆದರು. ಈಗಲೂ ಭಾಷೆಯ ವಿಭಜನೆ ಮುಂದುವರಿದಿದೆ ಎಂದರು.
ಈ ನಾಡಿನಲ್ಲಿ ಮಹಿಷಾ ದಸರಾ ಮೂಲಕ ಸಂಸ್ಕೃತಿಯ ಮೂಲಕ ಒಡೆಯುವ ಕೆಲಸವಾಗುತ್ತಿದೆ. ಕ್ರೈಸ್ತರು ನಿರಂತರ ಮತಾಂತರ ಮಾಡುವ ಮೂಲಕ ಒಡೆದರು. ನಮ್ಮ ಮಂದಿರವನ್ನು ಕ್ರೈಸ್ತರು ಕಾಪಿ ಮಾಡಿದರು. ಚರ್ಚ್ನಲ್ಲಿ ಉರುಳುಸೇವೆ, ರಥಯಾತ್ರೆ, ಗರುಡಕಂಬ ಎಲ್ಲವೂ ಇದೆ. ಇವತ್ತು ಶೌರ್ಯ ತೋರಿಸಿ ಅವರನ್ನು ತಡೆಯುವ ಕೆಲಸವಾಗಬೇಕಾಗಿದೆ ಎಂದರು.
ಮುಸ್ಲಿಮರು ಲವ್ ಜಿಹಾದ್ ಮೂಲಕ ಹಿಂದೂಗಳನ್ನು ಒಡೆಯುತ್ತಿದ್ದಾರೆ. ಶಿವಮೊಗ್ಗದಲ್ಲಿ ತಲವಾರು ಹಿಡಿದುಕೊಂಡು ಯಾಕೆ ತಿರುಗುತ್ತಾರೆ ಗೊತ್ತಾ? ಈ ರಾಜ್ಯದ ಸರ್ಕಾರ ಅವರ ಪರವಾಗಿಯೇ ಇದೆ. ರಾಜ್ಯದ ಗೃಹ ಸಚಿವರು ಇದು ಅಲ್ಲಾಹನ ಕೃಪೆಯಿಂದ ಬಂದ ಸರ್ಕಾರ ಅಂತಾರೆ. ರಾಜ್ಯದ ಮುಖ್ಯಮಂತ್ರಿ ಮುಸ್ಲಿಮರ ಅನುದಾನ ಹೆಚ್ಚಿಸಿದರು. ಮಧು ಬಂಗಾರಪ್ಪ ಹಿಂದೂಗಳು ತ್ರಿಶೂಲ ಹಿಡಿದ ಕಾರಣಕ್ಕೆ ಮುಸಲ್ಮಾನರು ತಲವಾರು ಹಿಡಿದರು ಅಂತಾರೆ. ಈ ಸರ್ಕಾರ ಸಣ್ಣ ಸಣ್ಣ ವಿಷಯದಲ್ಲಿ ಎಫ್ಐಆರ್ ಹಾಕುತ್ತಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಉದಯನಿಧಿ ಸ್ಟಾಲಿನ್ ಹೇಳಿದ ಸನಾತನ ಧರ್ಮದ ಹೇಳಿಕೆಗೆ ಇಲ್ಲಿನ ಇಬ್ಬರು ಮಂತ್ರಿಗಳು ಬೆಂಬಲ ಕೊಟ್ಟಿದ್ದಾರೆ. ಒಬ್ಬ ಮಂತ್ರಿ ಹಿಂದೂ ಅಂದರೆ ಅಶ್ಲೀಲ ಅಂತ ಹೇಳಿದ್ದ. ಆದರೆ ಅಂಥವರಿಗೆ ಈ ಶೌರ್ಯ ಜಾಗರಣೆ ಮೂಲಕ ಉತ್ತರ ಕೊಡಬೇಕಿದೆ. ಮುಸ್ಲಿಮರು ತರುಣರಿಗೆ ಡ್ರಗ್ಸ್ ಕೊಟ್ಟು ಹಾಳು ಮಾಡುತ್ತಿದ್ದಾರೆ. ಹಿಂದೂ ಧರ್ಮದ ಬಗ್ಗೆ ಇಲ್ಲದ ಪ್ರಶ್ನೆಗಳನ್ನು ಕೇಳಿ ತಲೆ ಕೆಡಿಸುತ್ತಿದ್ದಾರೆ ಎಂದರು.
ಹರ್ಷನ ಹತ್ಯೆಯಾದಾಗ ಲಾಠಿ ಹಿಡಿದ ಪೊಲೀಸರ ಎದುರು ಮುಸ್ಲಿಂ ಯುವಕರು ತಲ್ವಾರ್ ಹಿಡಿದು ತಿರುಗಾಡಿದರು. ಈ ಬಾರಿಯೂ ತಲ್ವಾರು ಹಿಡಿದು ತಿರುಗಾಡುತ್ತಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಅವರ ಜೊತೆಗೆ ಇದ್ದಾರೆ. ಅಧಿಕಾರ ಮುಗಿಯುವ ವೇಳೆಗೆ ಮುಸ್ಲಿಮರಿಗೆ ಹತ್ತು ಭಾಗ ಅನುದಾನ ಜಾಸ್ತಿ ಮಾಡೋದಾಗಿ ಹೇಳುತ್ತಾರೆ ಎಂದರು.
ಗೃಹ ಸಚಿವ ಡಿಜೆ ಹಳ್ಳಿ, ಕೆಜೆ ಹಳ್ಳಿಯ ಪುಂಡರನ್ನು ಬಿಡುಗಡೆ ಮಾಡುವುದಾಗಿ ಹೇಳುತ್ತಾರೆ. ಕೃಷಿ ಸಚಿವ ಗೋವುಗಳನ್ನು ಹತ್ಯೆ ಮಾಡಿದರೆ ತಪ್ಪೇನು ಅಂತಾ ಹೇಳುತ್ತಾರೆ. ಹಿಂದೂಗಳು ಏನು ಮಾಡಿದರೂ ರಾಜ್ಯದ ಮಾವೋವಾದಿಗಳು ಮುಗಿ ಬೀಳುತ್ತಾರೆ. ಆದರೆ ಮುಸ್ಲಿಮರು ತಪ್ಪು ಮಾಡಿದಾಗ ಅದನ್ನು ಮಾವೋವಾದಿಗಳು ಕವರ್ ಮಾಡುತ್ತಾರೆ ಎಂದರು.
2050 ರಲ್ಲಿ ಮೂವತ್ತು ಕೋಟಿ ಮುಸ್ಲಿಂ ಜನಸಂಖ್ಯೆ ಮಾಡುವ ಪ್ರಯತ್ನ ದೇಶದಲ್ಲಿ ನಡೆಯುತ್ತಿದೆ. ಇಸ್ರೇಲ್ ಘಟನೆ ನಮ್ಮ ದೇಶದಲ್ಲೂ ಆಗುತಿತ್ತು. ಆದರೆ ಜನರು ಮತ್ತು ಉಗ್ರರ ನಡುವೆ ಮೋದಿ ನಿಂತು ನಮ್ಮನ್ನು ಕಾಪಾಡುತ್ತಿದ್ದಾರೆ ಎಂದರು.
ನಾವು ಶಿವಾಜಿಯ ಫೋಟೋ ಹಾಕುತ್ತೇವೆ ಅಂತಾ ಮುಸ್ಲಿಮರು ಟಿಪ್ಪುವಿನ ಫೋಟೋ ಹಾಕುತ್ತಾರೆ. ಸ್ವಾತಂತ್ರ್ಯ ಪೂರ್ವದಲ್ಲಿ ಗಾಂಧೀಜಿ ಶಾಂತಿಯ ಮಾತು ಹೇಳಿದ್ದರು. ಈ ಮೂಲಕ ಮುಸ್ಲಿಮರ ತುಷ್ಟೀಕರಣ ಮಾಡಿದರು. ಆದರೆ ಮುಸ್ಲಿಮರು ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದರು. ಅಟಲ್ ಬಿಹಾರಿ ವಾಜಪೇಯಿ ಕೂಡಾ ಶೌರ್ಯ ಮರೆತು ಪಾಕ್ ಜೊತೆ ಸ್ನೇಹದ ಹಸ್ತ ಚಾಚಿದ್ದರು. ಆದರೆ ಅವರೂ ಕಾರ್ಗಿಲ್ ಯುದ್ಧವನ್ನು ಮಾಡಿದರು. ಈಗ ಬಂದಿರುವ ನರೇಂದ್ರ ಮೋದಿ ಪಾಕ್ಗೆ ಪಾಠ ಕಲಿಸಿದರು. ನಮ್ಮ ತಂಟೆಗೆ ಬಂದ್ರೆ ನುಗ್ಗಿ ಹೊಡೆಯುವ ಎಚ್ಚರಿಕೆ ನೀಡಿದರು ಎಂದರು.