ಹಾವೇರಿ: ಸನಾತನ ಧರ್ಮವನ್ನು ಮಲೇರಿಯಾ ರೋಗಕ್ಕೆ ಹೋಲಿಕೆ ಮಾಡುವುದನ್ನು ಕೇಳಿ ನಾವೆಲ್ಲಾ ಸುಮ್ಮನೇ ಕುಳಿತುಕೊಳ್ಳಬೇಕೇ? ನಮ್ಮ ಮೈಯಲ್ಲಿ ಸನಾತನ ಹಿಂದೂ ಧರ್ಮದ ರಕ್ತ ಹರಿಯುತ್ತಿದೆ. ನಮ್ಮನ್ಮು ತಡವಿದರೆ ನಾವು ಸುಮ್ಮನೆ ಕೂರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುಡುಗಿದ್ದಾರೆ.
ಶನಿವಾರ ಬಂಕಾಪುರದಲ್ಲಿ ಹಿಂದೂ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹಿಂದೂ ಗಣಪತಿ ತಡೆಯುವ ಪ್ರಯತ್ನ ಇಲ್ಲಿ ನಡೆಯಿತು. ಅದಕ್ಕೆ ಗಣಪತಿ ಶಕ್ತಿ ಇಡೀ ಕನ್ನಡ ನಾಡಿಗೆ ಗೊತ್ತಾಯಿತು. ಗಣಪತಿ ಇಟ್ಟಿದ್ದೇ ಮಾರ್ಗ. ಯಾರೂ ಕೂಡಾ ಗಣಪತಿಯನ್ನು ತಡೆಯುವ ಶಕ್ತಿ ಹೊಂದಿಲ್ಲ. ಇದು ಗಣಪತಿ ಭಕ್ತರ ಶಕ್ತಿ. ಗಣೇಶನ ಶಕ್ತಿ ತೋರಿಸಿದರೆ ಏನಾಗುತ್ತೆ ಎನ್ನುವುದು ಎಲ್ಲರಿಗೂ ಗೊತ್ತು ಎಂದರು.
ಸನಾತನ ಧರ್ಮ ವಿಶ್ವದ ಮಾನವರ ಕಲ್ಯಾಣ ಧರ್ಮ. ಎಲ್ಲಾ ಧರ್ಮಿಯರು ಈ ದೇಶದಲ್ಲಿ ಇದ್ದಾರೆ. ಪಾಕಿಸ್ತಾನ, ಅಪಘಾನಿಸ್ತಾನದಲ್ಲಿ ಇರುವುದು ಒಂದೇ ಒಂದು ಧರ್ಮ. ಅಲ್ಲಿ ಜೀವಂತ ಬದುಕಲು ಸಾಧ್ಯವಿಲ್ಲ. ನಾವು ಎಲ್ಲರನ್ನೂ ಒಪ್ಪಿಕೊಂಡು ಬಾಳುತ್ತಿದ್ದೇವೆ. ಇಂಥ ವಿಶಾಲ ಧರ್ಮಕ್ಕೆ ಡೆಂಗ್ಯೂ ಮಲೇರಿಯಾ ಅಂತಾರಲ್ವಾ ಇವರು. ಇದೇ ಮಾತು ಬೇರೆ ಧರ್ಮದ ಬಗ್ಗೆ ಹೇಳಲಿ. ಇಷ್ಟೊತ್ತಿಗೆ ಅವರ ಗತಿ ಏನಾಗ್ತಿತ್ತು? ಇದಕ್ಕೆಲ್ಲಾ ಒಂದೇ ಪರಿಹಾರ ನಾವೆಲ್ಲಾ ಒಂದಾಗಬೇಕು, ಜಾಗೃತಿ ಆಗಬೇಕು ಎಂದು ಹೇಳಿದರು.
ಸರ್ವೇ ಜನಾ ಸುಖಿನೋಭವಂತು ಎನ್ನುವ ಮಾತು ಎತ್ತಿ ಹಿಡಿಯಬೇಕು. ಕೆಲವರಿಗೆ ಭಾರತ ಶಕ್ತಿಶಾಲಿ ಅಭಿವೃದ್ಧಿಯಾಗುವುದು ಬೇಕಿಲ್ಲ. ನಮ್ಮ ಸರ್ಕಾರ ಇದ್ದಾಗ ಯಾವ ದುಷ್ಟ ಶಕ್ತಿಗೂ ತಲೆ ಎತ್ತಲು ಬಿಟ್ಟಿಲ್ಲ. ಕೆ.ಜೆ ಹಳ್ಳಿ ಡಿ.ಜಿ ಹಳ್ಳಿಯಲ್ಲಿ ತಪ್ಪು ಮಾಡಿದವರನ್ನು ಬಿಡಲಿಲ್ಲ. ಆದರೆ ಅಮಾಯಕರ ಮೇಲಿನ ಕೇಸು ರದ್ದು ಮಾಡಿ ಎಂದು ಪತ್ರ ಬರೆಯುತ್ತಾರೆ. ದಾಳಿಕೋರರ ಮೇಲಿನ ಕೇಸು ತಗೆಯಿರಿ ಎಂದು ಪತ್ರ ಬರೆಯುತ್ತಾರೆ. ಇಂಥ ಶಕ್ತಿಗಳನ್ನು ನಾವು ಧಮನ ಮಾಡದೇ ಇದ್ದರೆ ಸರ್ವೆ ಜನಾ ಸುಖಿನೋ ಭವಂತೂ ಆಗುವುದಿಲ್ಲ ಎಂದರು.
ಶಿವಮೊಗ್ಗದಲ್ಲಿ ಪೋಲೀಸರ ಮೇಲೂ ಕಲ್ಲು ತೂರಿದ್ದಾರೆ. ಆದರೆ ಗೃಹ ಸಚಿವರು ಅದು ಸಣ್ಣ ಘಟನೆ ಎನ್ನುತ್ತಾರೆ. ಅವರ ಪೊಲೀಸರೇ ಲಾಠಿ ಚಾರ್ಜ್ ಮಾಡಿದರೆ ಸಣ್ಣ ಘಟನೆ ಅನ್ನುತ್ತಾರೆ. ಯಾಕೆಂದರೆ ಅದನ್ನು ಸರ್ಕಾರದ ಮೊಮ್ಮಕ್ಕಳು ಮಾಡಿದ್ದಾರೆ. ರಾಗಿ ಗುಡ್ಡದಲ್ಲಿ ಗಣೇಶೋತ್ಸವ ನಡೆದಾಗ ಒಂದು ಸಣ್ಣ ಘಟನೆ ನಡೆಯಲಿಲ್ಲ. ಆದರೆ ಒಂದು ವಾರದ ಬಳಿಕ ಈದ್ ಮಿಲಾದ್ ಬಳಿಕ ಕಲ್ಲು ತೂರಾಟ ಆಯಿತು. ಬಿಜೆಪಿಯವರೇ ಅಂಥ ವೇಷ ಹಾಕಿಕೊಂಡು ಈ ತರ ಮಾಡುತ್ತಾರೆ ಅಂತ ಮಂತ್ರಿ ಹೇಳಿದ್ದಾರೆ. ಆದರೆ, ನಮ್ಮ ಹುಡುಗರು ಇನ್ನೊಂದು ವೇಷ ಹಾಕಿಕೊಳ್ಳುವ ಹೇಡಿಗಳಲ್ಲ ಎಂದು ಬಸವರಾಜ ಬೊಮ್ಮಾಯಿ ಹೇಳಿದರು. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.