ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮನವಿಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸ್ಪಂದಿಸಿದ್ದು, ಈ ಬಾರಿಯ ಮೈಸೂರು ದಸರಾದಲ್ಲಿ ಏರ್ ಶೋಗೆ ಕೇಂದ್ರ ಅನುಮತಿ ನೀಡಿದೆ. ಹೀಗಾಗಿ ಜಿಲ್ಲಾಧಿಕಾರಿ ರಾಜೇಂದ್ರ ಅವರು ಇಂದು ಬನ್ನಿ ಬಂಟಪ ಮೈದಾನಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಅಲ್ಲದೇ ಮೈಸೂರು ಏರ್ ಬೇಸ್ ಗ್ರೂಪ್ ಕ್ಯಾಪ್ಟನ್ ಡಿ.ಕೆ. ಹೋಜಾ ಅವರ ಜೊತೆ ಚರ್ಚೆ ನಡೆಸಿದರು.
ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಜನರನ್ನು ಆಕರ್ಷಿಸುವ ಏರ್ ಶೋ ಆಯೋಜನೆಗೆ ಅನುಮತಿ ನೀಡುವಂತೆ ಸಿದ್ದರಾಮಯ್ಯ ಅವರು ಇತ್ತೀಚೆಗೆ ನವದೆಹಲಿಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದರು. ಇದೀಗ ಸಿಎಂ ಅವರ ಮನವಿಗೆ ಕೇಂದ್ರ ಸ್ಪಂದಿಸಿದ್ದು, ಮೈಸೂರು ದಸರಾ ವೇಳೆ ಏರ್ ಶೋ ನಡೆಸಲು ಗ್ರೀನ್ ಸಿಗ್ನಲ್ ನೀಡಿದೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ಮೈಸೂರು ದಸರಾ ವೇಳೆ ಪ್ರವಾಸಿಗರು ಹಾಗೂ ಮೈಸೂರಿಗರು ಏರ್ ಶೋ ಕಣ್ತುಂಬಿಕೊಳ್ಳಬಹುದಾಗಿದೆ.