ಪುತ್ತೂರಿನ ವಿವೇಕಾನಂದ, ಆಳ್ವಾಸ್‌ ಹಾಗೂ ಪೂರ್ಣಪ್ರಜ್ಞ ಕಾಲೇಜುಗಳಿಗೆ ಸ್ವಾಯತ್ತ ಸ್ಥಾನಮಾನವನ್ನು ನೀಡಲು ಒಪ್ಪಿಗೆ ನೀಡಿದ ಮಂಗಳೂರು ವಿಶ್ವವಿದ್ಯಾನಿಲಯ

0
90

ಮಂಗಳೂರು, ಅ. 5 : ಪುತ್ತೂರಿನ ವಿವೇಕಾನಂದ ಕಾಲೇಜು, ಮೂಡು ಬಿದಿರೆಯ ಆಳ್ವಾಸ್‌ ಕಾಲೇಜು ಹಾಗೂ ಉಡುಪಿಯ ಪೂರ್ಣಪ್ರಜ್ಞ ಕಾಲೇಜುಗಳಿಗೆ ಸ್ವಾಯತ್ತ ಸ್ಥಾನಮಾನವನ್ನು ನೀಡಲು ಮಂಗಳೂರು ವಿಶ್ವವಿದ್ಯಾನಿಲಯವು ಒಪ್ಪಿಗೆ ನೀಡಿದ್ದು, ವರದಿಯನ್ನು ಸರಕಾರಕ್ಕೆ ಮಂಡಿಸಲು ಅನುಮೋದನೆ ದೊರೆತಿದೆ.

ಬುಧವಾರ ನಡೆದ ಮಂಗಳೂರು ವಿ.ವಿ.ಯ ಶೈಕ್ಷಣಿಕ ಮಂಡಳಿಯ 2023-24ನೇ ಸಾಲಿನ ದ್ವಿತೀಯ ಸಾಮಾನ್ಯ ಸಭೆಯಲ್ಲಿ ಅವಿಭಜಿತ ಜಿಲ್ಲೆಯ 3 ಕಾಲೇಜುಗಳಿಗೆ ಸ್ವಾಯತ್ತ ಸ್ಥಾನಮಾನ ನೀಡುವ ಮಹತ್ವದ ನಿರ್ಧಾರವನ್ನು ಪ್ರಕಟಿಸಲಾಯಿತು.

ಕುಲಪತಿ (ಪ್ರಭಾರ) ಪ್ರೊ| ಜಯರಾಜ್‌ ಅಮೀನ್‌ ಮಾತನಾಡಿ, ಮಂಗಳೂರು ವಿ.ವಿ. ಸಂಯೋಜಿತ 3 ಕಾಲೇಜುಗಳಿಗೆ ಸ್ವಾಯತ್ತ ಸ್ಥಾನಮಾನಕ್ಕೆ ಯುಜಿಸಿಯಿಂದ ಅನುಮತಿ ದೊರೆತಿದೆ. ಮುಂದುವರಿದ ಭಾಗವಾಗಿ ವಿ.ವಿ.ಯಿಂದ ರಚಿಸಲಾದ ಸ್ಥಾಯೀ ಸಮಿತಿಯು 3 ಕಾಲೇಜುಗಳಿಗೆ ಭೇಟಿ ನೀಡಿ ಪರಿಶೀಲಿಸಿ ಸ್ವಾಯತ್ತ ಸ್ಥಾನಮಾನದ ಬಗ್ಗೆ ಪೂರಕ ವರದಿಯನ್ನು ನೀಡಿದೆ.

ವರದಿಯನ್ನು ಸಿಂಡಿಕೇಟ್‌ ಸದಸ್ಯರಿಗೆ ರವಾನಿಸಲಾಗಿದ್ದು, ಇಬ್ಬರು ಸದಸ್ಯರಿಂದ ಮಾತ್ರ ವಿವರ ರಹಿತ ಆಕ್ಷೇಪಣೆ ಬಂದಿದೆ. ಉಳಿದ ಸದಸ್ಯರಿಂದ ಯಾವುದೇ ಅಭಿಪ್ರಾಯ ಬಾರದ ಹಿನ್ನೆಲೆಯಲ್ಲಿ ವರದಿ ಅನುಮೋದಿಸಿ ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಒಪ್ಪಿಗೆ ಪಡೆಯಲಾಗಿದೆ. ಅ. 12ರಂದು ಸಿಂಡಿಕೇಟ್‌ ಸಭೆಯಲ್ಲಿ ಇದನ್ನು ಮಂಡಿಸಲಾಗುತ್ತದೆ. ಬಳಿಕ ಸರಕಾರಕ್ಕೆ ವರದಿ ಕಳುಹಿಸಿ ಅನುಮತಿ ದೊರೆಯಬೇಕಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕುಲಸಚಿವ (ಆಡಳಿತ) ರಾಜು ಕೆ., ಕುಲಸಚಿವ (ಪರೀಕ್ಷಾಂಗ) ರಾಜು ಕೃಷ್ಣ ಚಲ್ಲಣ್ಣನವರ್‌, ಹಣಕಾಸು ಅಧಿಕಾರಿ ಡಾ| ಸಂಗಪ್ಪ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here