ದಕ್ಷಿಣ ಕನ್ನಡ: ಮಂಗಳೂರಿನಲ್ಲಿ ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಅಬ್ಬಕ್ಕನ ಪ್ರತಿಮೆ ಸರ್ಕಲ್ ಮೇಲೇರಿ ಧಾರ್ಮಿಕ ಧ್ವಜವನ್ನು ಹಾರಿಸಿದ್ದಕ್ಕಾಗಿ ಯುವಕರ ಗುಂಪೊಂದಕ್ಕೆ ನೋಟಿಸ್ ಜಾರಿ ಮಾಡಿರುವುದಾಗಿ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಮಂಗಳೂರಿನ ವೀರರಾಣಿ ಅಬ್ಬಕ್ಕ ವೃತ್ತದಲ್ಲಿ ಸೆಪ್ಟೆಂಬರ್ 28 ರಂದು ಈದ್ ಮಿಲಾದ್ ಮೆರವಣಿಗೆ ವೇಳೆ ಹಸಿರು ಬಾವುಟ ಹಿಡಿದು ಯುವಕರು ಪ್ರತಿಮೆಯನ್ನು ಏರಿದ್ದರು. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆಕ್ರೋಶ ವ್ಯಕ್ತವಾಗಿದೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಉಳ್ಳಾಲ ಪೊಲೀಸರು ವಿಡಿಯೋ ದೃಶ್ಯಾವಳಿಗಳನ್ನು ಸಂಗ್ರಹಿಸಿದ್ದಾರೆ. ಯುವಕರನ್ನು ಗುರುತಿಸಿದ್ದು, ತನಿಖಾಧಿಕಾರಿಯ ಮುಂದೆ ಹಾಜರಾಗುವಂತೆ ನೋಟಿಸ್ ಕಳುಹಿಸಿದ್ದಾರೆ.
ಮೆರವಣಿಗೆಯಲ್ಲಿ ನೂರಾರು ಯುವಕರು ಪ್ರತಿಮೆಯ ಮೇಲೆ ಹತ್ತಿ ಅಗೌರವದಿಂದ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ. ಯುವಕರು ರಸ್ತೆ ತಡೆ ನಡೆಸಿ ನಿರಂತರವಾಗಿ ಹಾರ್ನ್ ಮಾಡಿದ್ದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಂಗಳೂರು ಕೋಮುಸೂಕ್ಷ್ಮ ನಗರವಾಗಿರುವುದರಿಂದ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ದಕ್ಷಿಣ ಕನ್ನಡ ಜಿಲ್ಲೆಯ ಮಂಜನಾಡಿ, ಮದಕ, ಬಂಟ್ವಾಳ, ಬೆಳ್ತಂಗಡಿ, ದೇರಳಕಟ್ಟೆ, ಕೊಣಾಜೆ ಮತ್ತು ಉಳ್ಳಾಲದ ಯುವಕರನ್ನು ಗುರುತಿಸಿದ್ದಾರೆ.