ಬೆಂಗಳೂರು, ಸೆ. 27: ಕರ್ನಾಟಕದ ಹಿರಿಯ ವ್ಯಕ್ತಿಯೊಬ್ಬರು ಮೂರು ವಿಭಿನ್ನ ಕಂಪನಿಗಳಲ್ಲಿ 10.3 ಕೋಟಿ ರೂ.ಗಿಂತ ಹೆಚ್ಚು ಮೌಲ್ಯದ ಷೇರುಗಳನ್ನು ಹೊಂದಿದ್ದಾರೆ ಎನ್ನಲಾಗಿದ್ದು, ಆ ಕುರಿತು ಅವರು ಮಾತನಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅಷ್ಟೊಂದು ಮೌಲ್ಯದ ಷೇರುಗಳನ್ನು ಹೊಂದಿದ್ದರೂ ಅತಿ ಸರಳವಾಗಿ ಜೀವನ ನಡೆಸುತ್ತಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಅವರ ಬಗ್ಗೆ ಉಲ್ಲೇಖಿಸಲಾಗಿದೆ. ವಿಡಿಯೋದಲ್ಲಿ ಹೇಳಿರುವ ಪ್ರಕಾರ ಅವರು, 10.3 ಕೋಟಿ ರೂ.ಗಿಂತಲೂ ಹೆಚ್ಚು ಮೌಲ್ಯದ ಷೇರುಗಳನ್ನು ಹೊಂದಿದ್ದಾರೆ. ಅವುಗಳ ಲಾಭಾಂಶದಿಂದಲೇ ವಾರ್ಷಿಕವಾಗಿ 6 ಲಕ್ಷ ರೂ. ಗಳಿಸುತ್ತಿದ್ದಾರೆ. ಈ ಬಗ್ಗೆ ರಾಜೀವ್ ಮೆಹ್ತಾ ಎಂಬ ವ್ಯಕ್ತಿ ಸಾಮಾಜಿಕ ಮಾಧ್ಯಮ ತಾಣ ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದಾರೆ.
ನನ್ನ ಬಳಿ 27,855 ಎಲ್ ಆ್ಯಂಡ್ ಟಿ ಷೇರುಗಳು, 2,475 ಅಲ್ಟ್ರಾಟೆಕ್ ಸಿಮೆಂಟ್ ಷೇರುಗಳು ಮತ್ತು 4,000 ಕರ್ನಾಟಕ ಬ್ಯಾಂಕ್ ಷೇರುಗಳಿವೆ. ನಾನು ಪ್ರತಿ ವರ್ಷ ಈ ಷೇರುಗಳಿಂದ 6,15,000 ರೂಪಾಯಿ ಲಾಭಾಂಶವನ್ನು ಗಳಿಸುತ್ತೇನೆ ಎಂದು ಹಿರಿಯ ವ್ಯಕ್ತಿ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಪ್ರಸ್ತುತ ವಹಿವಾಟಿನ ಬೆಲೆಗಳ ಪ್ರಕಾರ, ಅವರು 8.24 ಕೋಟಿ ರೂ. ಮೌಲ್ಯದ ಎಲ್ & ಟಿ ಷೇರುಗಳನ್ನು, 2.04 ಕೋಟಿ ರೂ. ಮೌಲ್ಯದ ಅಲ್ಟ್ರಾಟೆಕ್ ಷೇರುಗಳನ್ನು ಮತ್ತು 9.80 ಲಕ್ಷ ರೂ. ಮೌಲ್ಯದ ಕರ್ನಾಟಕ ಬ್ಯಾಂಕ್ ಷೇರುಗಳನ್ನು ಹೊಂದಿದ್ದಾರೆ ಎಂದು ರಾಜೀವ್ ಮೆಹ್ತಾ ‘ಎಕ್ಸ್’ ಪೋಸ್ಟ್ನಲ್ಲಿ ಉಲ್ಲೇಖಿಸಿದ್ದಾರೆ.
ಈ ಪೋಸ್ಟ್‌ಗೆ ಹಲವರು ಕಾಮೆಂಟ್ ಮಾಡಿ ಸರಳ ಜೀವನ ನಡೆಸುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.