ತಿರುವನಂತಪುರಂ: ಸೇನಾ ಸಿಬ್ಬಂದಿಯೊಬ್ಬರ ಕೈಗಳನ್ನು ಹಿಂದಕ್ಕೆ ಕಟ್ಟಿ ಹಾಕಿ ಮನಬಂದಂತೆ ಥಳಿಸಿ ಬಳಿಕ ಬೆನ್ನಿನಲ್ಲಿ ಪಿಎಫ್‍ಐ ಎಂದು ಕಿಡಿಗೇಡಿಗಳು ಬರೆದ ಘಟನೆಯೊಂದು ಕೇರಳದಲ್ಲಿ ಬೆಳಕಿಗೆ ಬಂದಿದೆ.
ಈ ಘಟನೆ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ನಡೆದಿದೆ. ಘಟನೆ ಸಂಬಂಧ ಸೇನಾ ಸಿಬ್ಬಂದಿಯು ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆದರೆ ಘಟನೆಗೆ ನಿಖರ ಕಾರಣ ಏನು ಎಂಬುದು ತಿಳಿದುಬಂದಿಲ್ಲ.
ಹಲ್ಲೆಗೊಳಗಾದ ಸೇನಾ ಸಿಬ್ಬಂದಿಯನ್ನು ಶೈನ್ ಕುಮಾರ್ ಎಂದು ಗುರುತಿಸಲಾಗಿದೆ. ಇವರ ನಿವಾಸ ಕಡಕ್ಕಲ್ ಹತ್ತಿರದ ರಬ್ಬರ್ ತೋಟದಲ್ಲಿ 6 ಜನರಿದ್ದ ಗುಂಪು ಭಾನುವಾರ ರಾತ್ರಿ ಈ ಕೃತ್ಯ ಎಸಗಿದೆ. ಟೇಪ್‍ನಿಂದ ತನ್ನ ಎರಡೂ ಕೈಗಳನ್ನು ಹಿಂದಕ್ಕೆ ಕಟ್ಟಿ, ಥಳಿಸಿ ಬಳಿಕ ಬೆನ್ನಲ್ಲಿ ಹಸಿರು ಬಣ್ಣ ಪೈಂಟ್‍ನಲ್ಲಿ ಪಿಎಫ್‍ಐ ಎಂದು ಬರೆದಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಅವರು ತಿಳಿಸಿದ್ದಾರೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‍ಎ) ಅಡಿಯಲ್ಲಿ ನಿಷೇಧಿತ ಪಿಎಫ್‍ಐ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಕೇರಳದ ಹಲವು ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ ದಿನ ಈ ಘಟನೆ ವರದಿಯಾಗಿದೆ. ಎರ್ನಾಕುಲಂ, ಮಲಪ್ಪುರಂ, ವಯನಾಡ್ ಮತ್ತು ತ್ರಿಶೂರ್ ಸೇರಿದಂತೆ ಕನಿಷ್ಠ ನಾಲ್ಕು ಜಿಲ್ಲೆಗಳಲ್ಲಿ ದಾಳಿ ನಡೆಯುತ್ತಿದೆ. ಸೋಮವಾರ ಬೆಳಗ್ಗೆ ಆರಂಭವಾದ ದಾಳಿಗಳು ಸಿಆರ್‍ಪಿಎಫ್ ಮತ್ತು ಕೇರಳ ಪೊಲೀಸ್ ಸಿಬ್ಬಂದಿಯ ನೆರವಿನೊಂದಿಗೆ ಮುಂದುವರಿದಿದೆ.