ಬೆಂಗಳೂರು: ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರ ಉಡಾಫೆಯಾಗಿ ನಡೆದುಕೊಳ್ಳುತ್ತಿದೆ. ಇವರು ಹೀಗೆ ನಿರ್ಲಕ್ಷ್ಯ ಮಾಡಿದರೆ ಸ್ವಾಮೀಜಿಗಳು, ರೈತರು, ಬೆಂಗಳೂರಿನ ನಾಗರಿಕರು ದಂಗೆ ಏಳುತ್ತಾರೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಕಾವೇರಿ ವಿಚಾರದಲ್ಲಿ ಬಿಜೆಪಿಯ ಮುಂದಿನ ಹೋರಾಟದ ಕುರಿತು ಪಕ್ಷದ ಕಚೇರಿಯಲ್ಲಿ ತಮ್ಮ ನೇತೃತ್ವದಲ್ಲಿ ಕಾವೇರಿ ಜಲಾನಯನ ಪ್ರದೇಶದ ಜಿಲ್ಲೆಗಳ ಪಕ್ಷದ ಪದಾಧಿಕಾರಿಗಳ ಸಭೆ ನಡೆಸಿ ನಂತರ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಕಾವೇರಿ ವಿಚಾರದಲ್ಲಿ ಈ ಸರ್ಕಾರ ತೀವ್ರವಾದ ಗಂಡಾಂತರ ತಂದಿದೆ. ಮೊದಲಿನಿಂದಲೂ ಎಡವಟ್ಟು ಮಾಡಿಕೊಂಡು ಬಂದಿದೆ. ಸುಪ್ರೀಂ ಕೋರ್ಟ್‌ನಲ್ಲಿ ಸರಿಯಾಗಿ ವಾದ ಮಾಡದೇ ಮತ್ತೆ 7.5 ಟಿಎಂಸಿ ನೀರು ಬಿಡುವ ಪರಿಸ್ಥಿತಿಗೆ ತಂದಿದೆ. ಇಷ್ಟೆಲ್ಲಾ ಆದರೂ ರಾಜ್ಯದ ಜನರಿಗೆ ಸರ್ಕಾರ ಮುಂದೇನು ಮಾಡುತ್ತದೆ ಎಂದು ಹೇಳಿಲ್ಲ. ಬಿಜೆಪಿ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಕಾವೇರಿ ಜಲಾನಯನ ಪ್ರದೇಶದ ಜಿಲ್ಲೆಗಳಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದರು.
ರಾಜ್ಯ ಸರ್ಕಾರ ಆರಂಭದಿಂದಲೂ ಗ್ಯಾರಂಟಿ ಹೆಸರು ಹೇಳಿ ಈಗ ಕಂಡೀಷನ್ ಹಾಕಿ ಅರ್ಧಂಬರ್ಧ ಜಾರಿಗೆ ತಂದಿದ್ದಾರೆ . ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾತೆತ್ತಿದರೆ ಬ್ರ್ಯಾಂಡ್ ಬೆಂಗಳೂರು ಎಂದು ಹೇಳುತ್ತಾರೆ. ಆದರೆ, ಬೆಂಗಳೂರಿನ ಕುಡಿಯುವ ನೀರಿನ ಬಗ್ಗೆ ಮಾತನಾಡುವುದಿಲ್ಲ. ನಮಗೆ ಬೇಕಿರುವುದು ನೀರಿನ ಗ್ಯಾರಂಟಿ. ಬೆಂಗಳೂರಿಗೆ ಪ್ರತ್ಯೇಕವಾಗಿ 4.5 ಟಿಎಂಸಿ ನೀರು ಕೊಡಲು ಟ್ರಿಬ್ಯುನಲ್ ಹೇಳಿದೆ. ಈ ಬಗ್ಗೆ ರಾಜ್ಯ ಸರ್ಕಾರ ಎಲ್ಲಿಯೂ ಪ್ರಸ್ತಾಪ ಮಾಡುತ್ತಿಲ್ಲ ಎಂದು ಕಿಡಿಕಾರಿದರು.