ಶಿವಮೊಗ್ಗ: ಕಾವೇರಿ ನದಿ ಕಾಂಗ್ರೆಸ್ ಹಾಗೂ ಡಿಕೆಶಿ ಸ್ವತ್ತಲ್ಲ. ಬದಲಿಗೆ ಇದು ರಾಜ್ಯದ ಜನರ ಸ್ವತ್ತು. ಕಾವೇರಿ ವಿಷಯ ಇಷ್ಟೊಂದು ಉಲ್ಬಣವಾಗಲು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಾರಣ. ಹೀಗಾಗಿ ತಕ್ಷಣವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿಕೆಶಿ ಅವರ ರಾಜೀನಾಮೆ ಪಡೆಯಬೇಕು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದರು.
ಶಿವಮೊಗ್ಗದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಕೆಶಿ ಅವರು INDIA ತೃಪ್ತಿಪಡಿಸಲು, ಸ್ಟಾಲಿನ್ ತೃಪ್ತಿಪಡಿಸಲು, ಸೋನಿಯಾ ಗಾಂಧಿ ಅವರನ್ನು ತೃಪ್ತಿಪಡಿಸುವ ಸಲುವಾಗಿ ಯಾರನ್ನೂ ಕೇಳದೇ ತಮಿಳುನಾಡಿಗೆ ಕದ್ದುಮುಚ್ಚಿ ನೀರು ಬಿಟ್ಟರು. ನೀರು ಬಿಡುವ ಮುಂಚೆ ಏನು ಮಾಡಿದರು? ಯಾರನ್ನಾದರೂ ಕೇಳಿದ್ರಾ ಎಂದು ಪ್ರಶ್ನಿಸಿದರು.
ನೀರು ಬಿಡುವ ಮೊದಲು ಸರ್ವಪಕ್ಷ ಸಭೆ, ನೀರಾವರಿ ತಜ್ಞರ ಜೊತೆ, ಕಾನೂನು ತಜ್ಞರ ಜೊತೆ, ರಾಜ್ಯದ ಸಂಸದರ ಜೊತೆ ಸಭೆ ನಡೆಸಿ ಅಭಿಪ್ರಾಯ ಪಡೆಯಬೇಕಿತ್ತು. ಅದು ಯಾವುದನ್ನೂ ಮಾಡದೇ ಮುಠ್ಠಾಳತನ ಮಾಡಿದರು ಎಂದರು. ರಾಜ್ಯದ ರೈತರು ಸಮಾಧಾನದಿಂದ ಇದ್ದಾರೆ. ರೈತರ ತಾಳ್ಮೆ ಯಾವಾಗ ಕೆಡುತ್ತದೆಯೋ ಗೊತ್ತಿಲ್ಲ. ರೈತರ ಪರಿಸ್ಥಿತಿ ಏನು? ಯಾವ ಬೆಳೆ ಬೆಳೆದಿದ್ದಾರೆ? ಜಲಾಶಯದ ಪರಿಸ್ಥಿತಿ ಏನು ಎಂಬುದರ ಬಗ್ಗೆ ಯಾವುದೇ ಅವಲೋಕನ ನಡೆಸಿಲ್ಲ. ಮಳೆ ಇಲ್ಲದೇ ರೈತರು ಈಗಾಗಲೇ ಕಂಗೆಟ್ಟು ಹೋಗಿದ್ದಾರೆ. ಸದ್ಯಕ್ಕೆ ರೈತರು ಸಮಾಧಾನದಿಂದ ಹೋರಾಟ ನಡೆಸುತ್ತಿದ್ದಾರೆ. ಅವರ ಆಕ್ರೋಶದ ಕಟ್ಟೆ ಯಾವಾಗ ಒಡೆಯುತ್ತದೆಯೋ ಗೊತ್ತಿಲ್ಲ ಎಂದರು.
ಕಾಂಗ್ರೆಸ್ ಮಾಡಿದ ತಪ್ಪನ್ನು ಮುಚ್ಚಲು ಪ್ರಧಾನಮಂತ್ರಿ ಅವರನ್ನು ಮಧ್ಯ ತರುತ್ತಿದ್ದಾರೆ. ತಜ್ಞರ ಜೊತೆ ಸಭೆ ನಡೆಸಿದ್ದರೆ ನಮ್ಮ ರಾಜ್ಯಕ್ಕೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಲೋಕಸಭೆ ಚುನಾವಣೆ ಮುಂದಿಟ್ಟುಕೊಂಡು ರಾಜ್ಯದ ಜನರಿಗೆ ಅನ್ಯಾಯ ಮಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಜಲಾಶಯಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ವಸ್ತು ಸ್ಥಿತಿ ಅರಿತುಕೊಳ್ಳಲಿ. ಕರ್ನಾಟಕ ಸದ್ಯಕ್ಕೆ ಶಾಂತಿಯಿಂದ ಇದೆ. ಮುಂದೆ ಶಾಂತಿಯಿಂದ ಇರುತ್ತದೆ ಎಂದು ನನಗೆ ಅನಿಸುವುದಿಲ್ಲ ಎಂದು ಹೇಳಿದರು.