ಹೋಗಿ ಬರುವಿರ ಸುದಣ್ಣ…?!

By: Ommnews

Date:

Share post:

✒️:- ಮನ್ಮಥ ಶೆಟ್ಟಿ ಪುತ್ತೂರು

Advertisement
Advertisement
Advertisement

ಬಿಳಿ ಬಣ್ಣದ ಅಂಗಿಯ ಜತೆ ಬಿಳಿ ಪಂಚೆ, ಗೌರವದ‌ ಅತೀ‌‌ ಮೆಲ್ಲನೆಯ ನಡಿಗೆ, ಮುಖದಲ್ಲಿ ಕಾಂತಿಯುತ ತೇಜಸ್ಸು, ಮೇಲು ಧ್ವನಿ.ಮನೆಯಿಂದ ‌ನಡೆದು ದೇವಾಲಯಕ್ಕೆ ಒಂದು ಸುತ್ತು ಹಾಕಿ ಕೈ ಮುಗಿಯುವ ರೀತಿ ಅನುಕರಣೀಯ.

ಪುತ್ತೂರಿನಲ್ಲಿ ಇವರ ಹೆಸರು ಪರಿಚಯ ಇಲ್ಲದವರಿಲ್ಲ ಯಾಕೆಂದರೆ ಅಷ್ಟೊಂದು ಜನಾನುರಾಗಿಯಾಗಿ ಬೆಳೆದವರು. ಕಾಲೇಜು ಹಂತದಲ್ಲಿ ನಾಯಕತ್ವವನ್ನು ಬೆಳೆಸಿಕೊಂಡ ಇವರು ವಿವೇಕಾನಂದ ಕಾಲೇಜಿನ ಮೊದಲ ವಿದ್ಯಾರ್ಥಿ ಸಂಘದ ನಾಯಕ, ಕ್ರೀಡೆಯಲ್ಲಿ ಅಪಾರ ಪರಿಶ್ರಮ ಪಟ್ಟು ಒರ್ವ ಸರ್ವಶ್ರೇಷ್ಠ ಕ್ರೀಡಾಪಟುವಾಗಿ ನಂತರದ ದಿನಗಳಲ್ಲಿ ಅದೆಷ್ಟೋ ಕ್ರೀಡಾಕೂಟ ಮತ್ತು ಕ್ರೀಡಾ ಪಟುಗಳನ್ನು ಬೆಳೆಸಿದವರು, ರಾಜಕೀಯವೆಂಬ ಚದುರಂಗದಾಟಕ್ಕೆ ಲಗ್ಗೆ ಇಟ್ಟ ಇವರು ಇಂದಿರಾ ಗಾಂಧಿಯವರ ಕಾಂಗ್ರೆಸ್ನ ಸಿದ್ದಾಂತವನ್ನು ಒಪ್ಪಿಕೊಂಡು – ಅಪ್ಪಿಕೊಂಡು‌ ಪಕ್ಷದ ದಾರಿಯಲ್ಲಿ ನಡೆದು ಪುತ್ತೂರಿನಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದ ರಾಜಕೀಯ ಭೀಷ್ಮ. ಪಕ್ಷಕ್ಕೆ ಭದ್ರ ಬುನಾದಿ ಹಾಕಿ ಎರಡು ಬಾರಿ ವಿಧಾನಸಭೆ ಪ್ರವೇಶಿಸುವ ಸಲುವಾಗಿ ಪರೀಕ್ಷೆ ಬರೆದಂತೆ(ಚುನಾವಣೆಗೆ ಸ್ಪರ್ಧಿಸಿದರು)ಪಕ್ಷ ಕೈ ಹಿಡಿದರು ಸಹ ಅಂದಿನ ಜನರು ಇವರ ಕೈ ಹಿಡಿಯಲಿಲ್ಲ. ಆದರೆ ಇವರ ಮುಂದಾಳತ್ವದಲ್ಲಿ ತನ್ನದೇ ಪಕ್ಷದ ಶಾಸಕರನ್ನು ಆಯ್ಕೆ ಮಾಡಿ ವಿಧಾನಸಭೆ‌‌‌‌ ಕಳುಹಿಸುವಲ್ಲಿ ಶೆಟ್ರು ಎಡವಲಿಲ್ಲ ಬದಲಾಗಿ ಸೈ ಎನಿಸಿಕೊಂಡರು. ರಾಜಕೀಯ ವ್ಯಕ್ತಿಗಳು ಇವರಿಂದ ಕಲಿಯಲು ತುಂಬಾ ಇದೆ‌, ಏನೆಂದರೆ ಚುನಾವಣಾ ಸಂಧರ್ಭದಲ್ಲಿ ಮಾತ್ರ ರಾಜಕೀಯ ನಂತರದಲ್ಲಿ ಮನುಷ್ಯತ್ವವೇ ಮೇಲೆಂಬುದನ್ನು ಸಾರಿದ ಮುತ್ಸದ್ದಿ.

ಸಾಮಾಜಿಕವಾಗಿ ಹಲವಾರು ಜನರಿಗೆ ಉಪಕಾರ ಮಾಡಿದ ಪುಣ್ಯಾತ್ಮರಾಗಿದ್ದರು. ಯಾಕೆಂದರೆ ಅವರೊಬ್ಬ ಕೊಡುಗೈ ದಾನಿ.
ತಾನು ಬದುಕುಬೇಕು ತನ್ನ ಜತೆ ತನ್ನವರು ಬಾಳಬೇಕು ಎಂಬ ಧ್ಯೇಯ ಇಟ್ಟುಕೊಂಡ ಮೇರು ವ್ಯಕ್ತಿತ್ವ.

ಧಾರ್ಮಿಕತೆಯಲ್ಲಿ ಎಳ್ಳಷ್ಟು ರಾಜಿ ಮಾಡದ ಸಂಸ್ಕಾರದ ವ್ಯಕ್ತಿತ್ವ ಎಂಬುದು ಇವರ ಅಧ್ಯಕ್ಷತೆಯಲ್ಲಿ ನಡೆಯುವ ಪುತ್ತೂರು ಕಿಲ್ಲೆಯ ಮೈದಾನದ ಗಣೇಶೋತ್ಸವವೇ ಸಾಕ್ಷಿ.

ಶ್ರೀ ಹನುಮಂತ ಮಲ್ಯರು 1957 ರಲ್ಲಿ ದೇವತಾ ಸಮಿತಿಯ ಮೂಲಕ ಆರಂಭಿಸಿದ ಗಣೇಶೋತ್ಸವ. ಇದು ಪುತ್ತೂರಿನ ಮೊದಲ ಗಣೇಶೋತ್ಸವ ಎಂಬ ಹೆಗ್ಗಳಿಕೆಯಿದೆ. ಮಲ್ಯರ ನಿಧನದ ನಂತರ ಈ ಗಣೇಶೋತ್ಸವದ
ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡು,ಒಂದಿಂಚು ಚ್ಯುತಿ ಬಾರದೇ ಮುನ್ನಡೆಸಿದ ಪುತ್ತೂರಿನ ಆಧುನಿಕ ಭಗೀರಥ.

ಸಾರ್ವಜನಿಕ ಗಣೇಶೋತ್ಸವದಲ್ಲಿ ಮೊತ್ತ ಮೊದಲ ಬಾರಿಗೆ ಮೂಡಪ್ಪ ಸೇವೆ ನಡೆಸಿ ಅದರಲ್ಲೂ ಸೈ ಎನಿಸಿಕೊಂಡು, ಜಿಲ್ಲೆಗೆ ಮಾದರಿ ಸೇವಾ ಕಾರ್ಯ ನಡೆಸಿದವರು, ಈ ಉತ್ಸವ ಅಂದು ಪುತ್ತೂರಿನ ಮಟ್ಟಿಗೆ ಒಂದು ಜಾತ್ರೆಯಾಗಿ, ಅನ್ನದಾಸೋಹದ ಕೇಂದ್ರವಾಗಿದ್ದು, ಅದೆಷ್ಟೋ ಕಲಾ ಪ್ರತಿಭೆಗಳಿಗೆ ಅವಕಾಶವನ್ನು ‌ಒದಗಿಸಿದೆ.

ಮಹಾಲಿಂಗೇಶ್ವರನಿಗೆ ದಿ.ಮುತ್ತಪ್ಪ ರೈ ಸಮರ್ಪಿಸಿದ ಬ್ರಹ್ಮರಥ ಸಮರ್ಪಣೆಯಲ್ಲಿ, ಬ್ರಹ್ಮ ಕಲಶ ಸಮಿತಿಯಲ್ಲಿ ಸೇವೆ ಸಲ್ಲಿಸಿದವರು. ಕಂಬಲ ಪ್ರೇಮಿಯಾಗಿ ಕೋಟಿ ಚೆನ್ನಯ ಜೋಡುಕರೆ ಕಂಬಲದ ಸಮಿತಿಯಲ್ಲಿ ‌ಜವಾಬ್ದಾರಿ ಮುನ್ನಡೆಸಿದವರು.

ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದಗ ಇವರು ಏನೂ ಮಾಡ್ಯರು…? ಎಲ್ಲರಂತೆ‌ ಇದು ಒಂದು ಕಮಿಟಿ ಎಂಬ ಮಾತು ಕೇಳಿ ಬರುತ್ತಿದ್ದ ಸಂಧರ್ಭದಲ್ಲಿ ತದ್ವಿರುದ್ಧವಾಗಿ ಮಾತಿನಲ್ಲಿ ಉತ್ತರ ನೀಡದೇ ಕಾರ್ಯದ ಮೂಲಕ ಉತ್ತರ ನೀಡಿದ ಆಧುನಿಕ ಶಿವ ಭಕ್ತ.

ಮಹಾಲಿಂಗೇಶ್ವರ ದೇವಾಲಯದಲ್ಲಿ ಯಶಸ್ವಿಯಾಗಿ ಅಚ್ಚುಕಟ್ಟಾಗಿ ಅನ್ನದಾನದ ಮೂಲಕ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿರುವುದಲ್ಲದೇ, ಊಟ ಆರಂಭದಿಂದ ಕೊನೆಯ ತನಕ ಅಲ್ಲೇ ಇದ್ದು ನೋಡಿಕೊಂಡು ಯಾರೊಬ್ಬರಿಗು ಅನ್ನ ಕಡಿಮೆಯಾಗದಂತೆ ನಿಗವಹಿಸುವವರು, ದೇವಾಲಯದಲ್ಲಿ ಶಿವನಿಗೆ ಅತೀ ಪ್ರೀಯ ಸೇವೆ ರುದ್ರಾಭೀಷೇಕ ಸೋಮವಾರದಂದು ಬ್ರಹ್ಮರ್ಪಾಣೆಯ ಮೂಲಕ ಸಂಕಲ್ಪ ವ್ಯವಸ್ಥೆ ಆರಂಭಿಸಿ ಭಕ್ತರ ಹೃದಯದಲ್ಲಿ ಭಕ್ತಿಯ ಜ್ಞಾನ ತುಂಬಿಸಿದರ ಜೊತೆಗೆ ಶೃಂಗೇರಿ ದೇವಾಲಯದ ಎದುರಿನ ರಾಯಗೋಪುರವನ್ನು ಹೋಲುವ ಗೋಪುರ ಮಹಾಲಿಂಗೇಶ್ವರ ದೇವರಿಗೂ ಸಮರ್ಪಣೆಯಾಗಬೇಕಂಬ ಮಹಾದಾಸೆಯನ್ನು ಈಡೇರಿಸಿ ಜನ ಮನ್ನಣೆ ಪಡೆದು, ದೇವಾಲಯದ ಧ್ವಜಸ್ತಂಭ(ಕೊಡಿಮರ)ಕ್ಕೆ ಚಿನ್ನದ ಲೇಪನ ಮಾಡಿಸಿ ನೂತನ ಸ್ತಂಭವನ್ನು ಕ್ರೇನ್ ‌ಮೂಲಕ ದೇವಾಲಯಕ್ಕೆ ಒಂದಿಂಚು ತೊಂದರೆ ಆಗದಂತೆ ಸ್ಥಾಪಿಸಿದವರು, ಗೋವಿನ ಬಗ್ಗೆ ಮಮತೆ, ದೈವಗಳ ಬಗ್ಗೆ ಅಪಾರ ನಂಬಿಕೆ ಇದ್ದವರು. ಈ ಎಲ್ಲಾ ವಿಚಾರಗಳನ್ನು ಅವರಲ್ಲಿ ಕೇಳುವಾಗ ಮಂದಹಾಸ ಬೀರಿ ಅವರು ಹೇಳುವ ಒಂದೇ ಮಾತು ಎಲ್ಲಾ ಅವನಿಚ್ಚೆ
(ಮಹಾಲಿಂಗೇಶ್ವರನ ಇಚ್ಚೆ)ನನ್ನದೇನಿಲ್ಲ ಭಕ್ತರ ಸಹಕಾರದಿಂದ ನಡೆಯುತ್ತದೆ‌. ನಾನು ನಿಮಿತ್ತ ಎನ್ನುವ ಮೆಲುದನಿಯು ಈಗಲೂ ‌ನನ್ನ ಕಿವಿಯಲ್ಲಿ ಕೇಳುತಿದೆ.

ಒಂದೊಮ್ಮೆ ಶಾಸಕರಾಗಿದ್ದರು ಇಷ್ಟು ಅಭಿಮಾನಿಗಳು ಇರುತ್ತಿದ್ದರೋ ಗೊತ್ತಿಲ್ಲ. ಆದರೇ ಮಹಾಲಿಂಗೇಶ್ವರ ಸೇವಾ ಕೈಂಕರ್ಯದಿಂದ ಇಡೀ ಪುತ್ತೂರಿನ ಜನತೆಯ ಹೃದಯದಲ್ಲಿ ಸ್ಥಾನ ಪಡೆದ ಸುದಣ್ಣ ಎಂದೆಂದೂ ಅಜಾರಾಮರ. ಇಂದಿಗೂ ಪುತ್ತೂರಿನ ‌ಜನತೆ ದೇವಾಲಯದಲ್ಲಿ ಇವರ ಅವಧಿಯಲ್ಲಿ ನಡೆದ ಕೆಲಸ ಕಾರ್ಯಗಳ ಬಗ್ಗೆ ಪಕ್ಷ ಬೇಧ ಮರೆತು ಶ್ಲಾಘನೀಯ ಮಾತುಗಳು ಕೇಳಿ ಬರುತ್ತಿವೆ.

ಧಾರ್ಮಿಕತೆಯಲ್ಲಿ ಅಪಾರ ಜ್ಞಾನ ಹೊಂದಿದ್ದ ಸುದಣ್ಣ, ಸಾಮಾಜಿಕ ಬದ್ದತೆಯ ವ್ಯಕ್ತಿ, ರಾಜಕೀಯದಲ್ಲಿ ಒಂದು ಹಂತದ ಧುರೀಣನೇ ಸೈ.

ಅಜಾತಶತ್ರು ಶತ್ರು ಎಂಬ ಮಾತು ಪ್ರಸ್ತುತ ಪುತ್ತೂರಿನಲ್ಲಿ ಇವರಿಗೆ ಒಪ್ಪುವ ಪದವಾಗಿದೆ ಎಂಬುದು ನನ್ನ ಅಂಬೋಣ

ಬರೆದಷ್ಟು ಮುಗಿಯಾದ ಸಾಧಕ‌ರು ನೀವು, ಮತ್ತೆ ಅಧ್ಯಕ್ಷರಾಗುವಿರಿ, ಹೊಸ ಪರಿಕಲ್ಪನೆಗಳನ್ನು ತರುವಿರಿ ಎಂಬ ನೀರಿಕ್ಷೆಯಲ್ಲಿದ್ದವರ ಪುತ್ತೂರಿನ ಜನತೆಯ ಪೈಕಿ ನಾನು ಒಬ್ಬ‌‌.

ವಿಧಿಯಾಟದಂತೇ
ಶಿವ ಕರೆದಾಗ ಹೋಗುವುದು ನಮ್ಮ ಧರ್ಮ. ಆದರೆ ಶಿವನ ಪಾದ ಸೇರುವ ತವಕದಲ್ಲಿ ನಮ್ಮನ್ನಗಲಿದ್ದೀರಿ ಎನ್ನಲು ಬಲು ನೋವಾಗುತ್ತಿದೆ.

ಇಷ್ಟು ಓದಿದ ಮೇಲೆ ಈ ವ್ಯಕ್ತಿ ಯಾರೆಂಬುದು ನಿಮಗೆ ತಿಳಿಯಬಹುದು. ಒಂದೊಮ್ಮೆ ತಿಳಿದಿಲ್ಲವಾದರೇ ಇವರು ಮತ್ಯಾರು ಅಲ್ಲ ಅದೇ ನಮ್ಮ ಪುತ್ತೂರಿನ ಆಧುನಿಕ ಭಗೀರಥ, ಅಜಾತಶತ್ರು ಸುಧಾಕರ ಶೆಟ್ಟಿ ನೆಲ್ಲಿಕಟ್ಟೆ

ಒರ್ವ ಸರ್ವ ಶ್ರೇಷ್ಠ ವ್ಯಕ್ತಿಯನ್ನು ಮತ್ತು ವ್ಯಕ್ತಿತ್ವವನ್ನು ಪುತ್ತೂರು ಕಳೆದುಕೊಂಡಿದೆ ಎಂಬುದು ನೂರಕ್ಕೆ ‌ನೂರು ಸತ್ಯ.

ಇದು‌ ನಿಮಗೆ‌ ಅಕ್ಷರದ ಶ್ರದ್ಧಾಂಜಲಿ

ಹೋಗಿ ಬರುವಿರ ಸುದಣ್ಣ….?!

    🙏 ಶಿವಾರ್ಪಣಾಮಸ್ತು 🙏

Share post:

LEAVE A REPLY

Please enter your comment!
Please enter your name here

ದೇಣಿಗೆ

Add an Introductory Description to make your audience curious by simply setting an Excerpt on this section