ಬಹುಭಾಷಾ ನಟಿ ಭಾವನಾ ಮೆನನ್ ಅವರು ಕನ್ನಡ, ತಮಿಳು, ಮಲಯಾಳಂ ಚಿತ್ರರಂಗದಲ್ಲಿ ಆ್ಯಕ್ಟಿವ್ ಆಗಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಕಾಡುವ ತಂದೆಯ ಅನುಪಸ್ಥಿತಿ ಬಗ್ಗೆ ಜಾಕಿ ಭಾವನಾ ಮಾತನಾಡಿದ್ದಾರೆ. ತಂದೆ ಜೊತೆಗಿನ ನೆನಪುಗಳನ್ನ ನಟಿ ಮೆಲುಕು ಹಾಕಿದ್ದಾರೆ.
ನಟಿ ಭಾವನಾ ಮಾತನಾಡಿ, ನನ್ನ ತಂದೆಯ ಸಾವಿನ ನೋವು ಯಾವಾಗಲೂ ಹಾಗೆಯೇ ಇರುತ್ತದೆ. ಹೊರಗೆ ಎಷ್ಟೇ ಖುಷಿಯಾಗಿದ್ದರೂ ಒಳಗಿನ ನೋವು ಹಾಗೆಯೇ ಇದೆ. ಇಷ್ಟು ವರ್ಷ ಕಳೆದರೂ ಆ ದುಃಖದಿಂದ ಹೊರಬರಲು ಸಾಧ್ಯವಾಗಿಲ್ಲ. ಜೀವನ ಸಂಪೂರ್ಣವಾಗಿ ಬದಲಾಗಿದೆ. ಆದರೆ ನನ್ನ ತಂದೆ ಇಲ್ಲ ಎಂಬುದು ನನ್ನನ್ನು ಯಾವಾಗಲೂ ಕಾಡುತ್ತದೆ. ಈ ಕಾಡುವಿಕೆ ಕೆಲವೊಮ್ಮೆ ಹೆಚ್ಚಿರುತ್ತದೆ, ಕೆಲವೊಮ್ಮೆ ಕಡಿಮೆ. ಆದರೆ, ಆ ನೋವು ಇಂದಿಗೂ ಹಾಗೆಯೇ ಇದೆ ಎಂದಿದ್ದಾರೆ.
ಭಾವನಾ ಅವರ ತಂದೆಯ ಹೆಸರು ಬಾಲಚಂದ್ರ. ಅವರು 2015ರಲ್ಲಿ ನಿಧನ ಹೊಂದಿದರು. ಆಗ ಅವರಿಗೆ 59 ವರ್ಷ ವಯಸ್ಸಾಗಿತ್ತು. ಬಾಲಚಂದ್ರ ಅವರಿಗೆ ಅನಾರೋಗ್ಯ ಕಾಡಿದ ಬಳಿಕ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ, ಯಾವುದೇ ಪ್ರಯೋಜನ ಆಗಿರಲಿಲ್ಲ. ತಂದೆಯ ಬಗ್ಗೆ ಅವರು ಯಾವಾಗಲೂ ಪ್ರೀತಿ ವ್ಯಕ್ತಪಡಿಸುತ್ತಾ ಇರುತ್ತಾರೆ. ಅವರು ಈ ಮಟ್ಟಕ್ಕೆ ಬೆಳೆಯಲು ತಂದೆ ಕಾರಣ ಎಂದು ಅವರು ಹಲವು ಬಾರಿ ವೇದಿಕೆಗಳಲ್ಲಿ ಹೇಳಿಕೊಂಡಿದ್ದಾರೆ.