ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಬಣ ಸಂಘರ್ಷ ತೀವ್ರಗೊಂಡಿದೆ. ಮೂರು ಡಿಸಿಎಂ ಹುದ್ದೆ ಸೃಷ್ಟಿಸಬೇಕು ಎಂಬ ಸಿಎಂ ಬಣದ ಪ್ರತಿಪಾದನೆ ಪಕ್ಷದೊಳಗೆ ಕಿಚ್ಚು ಹಚ್ಚಿದೆ. ಆದರೆ ಇದ್ಯಾವುದಕ್ಕೂ ಸಿದ್ದರಾಮಯ್ಯ ಬಣದ ಸಚಿವರು ಸೊಪ್ಪು ಹಾಕುತ್ತಿಲ್ಲ. ಬದಲಾಗಿ ಈ ವಿವಾದವನ್ನು ಇನ್ನಷ್ಟು ತೀವ್ರಗೊಳಿಸಲು ಯತ್ನಿಸುತ್ತಿದ್ದಾರೆ.
ಸಹಕಾರ ಸಚಿವ ಕೆಎನ್ ರಾಜಣ್ಣ ಮತ್ತೊಮ್ಮೆ ಮೂರು ಡಿಸಿಎಂ ಹುದ್ದೆ ಸೃಷ್ಟಿಸಬೇಕು ಎಂದು ಪ್ರತಿಪಾದಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಬೇಕು ಅಂದ್ರೆ ಮೂರು ಡಿಸಿಎಂ ಹುದ್ದೆ ಸೃಷ್ಟಿ ಅತ್ಯಗತ್ಯ. ಒಂದೊಮ್ಮೆ ಕಡಿಮೆ ಸೀಟ್ ಗೆದ್ದರೆ ರಾಜ್ಯದಲ್ಲಿ ಸರ್ಕಾರವೇ ವಿಸರ್ಜನೆ ಆಗಬಹುದು ಎಂಬ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ನನ್ನ ಹೇಳಿಕೆ ಹಿಂದೆ ಸಿಎಂ ಸಿದ್ದರಾಮಯ್ಯ ಪಾತ್ರವಿಲ್ಲ. ಮೂರು ಡಿಸಿಎಂ ಸೃಷ್ಟಿಸಿದ್ರೆ ಡಿಕೆ ಶಿವಕುಮಾರ್ ಪ್ರಾಮುಖ್ಯತೆಯೂ ಕಡಿಮೆ ಆಗುವುದಿಲ್ಲ. ಲೋಕಸಭೆ ಚುನಾವಣೆಯಲ್ಲಿ ಗೆಲ್ಲಬೇಕು ಎಂಬ ಸದುದ್ದೇಶದಿಂದ ಈ ಸೂತ್ರ ಮುಂದಿಟ್ಟಿದ್ದೇನೆ ಅಷ್ಟೇ ಎಂದು ಕೆಎನ್ ರಾಜಣ್ಣ ಸ್ಪಷ್ಟಪಡಿಸಿದ್ದಾರೆ. ಕೆಎನ್ ರಾಜಣ್ಣ ಅವರ ಮಾತುಗಳು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿವೆ.
ಮೂರು ಡಿಸಿಎಂ ಹುದ್ದೆ ಸೃಷ್ಟಿಸಬೇಕು ಎಂಬ ಕೆಎನ್ ರಾಜಣ್ಣ ಬೇಡಿಕೆ ಬಗ್ಗೆ ಕಾಂಗ್ರೆಸ್ ನಾಯಕರು ಎಚ್ಚರಿಕೆಯ ಪ್ರತಿಕ್ರಿಯೆ ನೀಡತೊಡಗಿದ್ದಾರೆ. ಈ ವಿಚಾರ ಹೈಕಮಾಂಡ್‌ಗೆ ಬಿಟ್ಟಿದ್ದು ಎಂದು ಸಚಿವರಾದ ಕೆಹೆಚ್ ಮುನಿಯಪ್ಪ, ಸಂತೋಷ್ ಲಾಡ್ ಜಾರಿಕೊಂಡಿದ್ದಾರೆ.