ನಟ ಧ್ರುವ ಸರ್ಜಾ ಅವರ ಮನೆಯಲ್ಲಿ ಸಂಭ್ರಮದ ವಾತಾವರಣ ನಿರ್ಮಾಣ ಆಗಿದೆ. ಅವರ ಪತ್ನಿ ಪ್ರೇರಣಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲೇ ಮಗು ಜನಿಸಿರುವುದು ಇಡೀ ಕುಟುಂಬಕ್ಕೆ ಖುಷಿ ನೀಡಿದೆ. ಮಗುವನ್ನು ನೋಡಲು ಮೇಘನಾ ರಾಜ್, ಸುಂದರ್ ರಾಜ್, ಪ್ರಮೀಳಾ ಜೋಶಾಯ್ ಮುಂತಾದವರು ಆಗಮಿಸಿದ್ದಾರೆ. ಈ ವೇಳೆ ಸುಂದರ್ ರಾಜ್ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ‘ಈಗಾಗಲೇ ಅವರ ಮನೆಗೆ ಗೌರಿ ಬಂದಾಯಿತು. ಈಗ ಗಣೇಶ ಬಂದಿದ್ದಾನೆ. ಯಾವುದೇ ಹೊಸ ಪರ್ವ ಬಂದಾಗ ಕುಟುಂಬಕ್ಕೆ ಸಂತೋಷ ನೀಡುತ್ತದೆ. ಈ ಮಗು ಗಜಕೇಸರಿ ಯೋಗದಲ್ಲಿ ಹುಟ್ಟಿದೆ. ಬಹಳ ದಿನಗಳಿಂದ ನಮ್ಮಲ್ಲಿ ಕವಿದಿದ್ದ ವಾತಾವರಣ ಮರೆಯಾಗಿ, ಬಿಳಿ ಮೋಡಗಳು ಬಂದಿವೆ. ಇದನ್ನು ನಾವು ನಿರೀಕ್ಷಿಸಿದ್ದೆವು. ದೇವರು ಇದ್ದಾನೆ ಎಂಬುದನ್ನು ಇದು ಸೂಚಿಸುತ್ತದೆ’ ಎಂದು ಸುಂದರ್ ರಾಜ್ ಹೇಳಿದ್ದಾರೆ.