ನವದೆಹಲಿ, ಸೆಪ್ಟೆಂಬರ್ 17: ಪ್ರಧಾನಿ ನರೇಂದ್ರ ಮೋದಿ ಇಂದು ತಮ್ಮ 73ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಕೇಂದ್ರ ಸಚಿವರು ಶುಭಾಶಯ ಕೋರಿದ್ದಾರೆ. ಮೋದಿಯವರ ಹುಟ್ಟುಹಬ್ಬದ ಜತೆಗೆ ಇಂದು ವಿಶ್ವಕರ್ಮ ಜಯಂತಿ ಕೂಡ, ಪ್ರಧಾನಿ ವಿಶ್ವಕರ್ಮ ಯೋಜನೆಗೆ ಇಂದು ಚಾಲನೆ ಸಿಗಲಿದೆ.
ಪ್ರಧಾನಿ ಮೋದಿ ಹುಟ್ಟುಹಬ್ಬಕ್ಕೆ ರಾಷ್ಟ್ರಪತಿ ಮುರ್ಮು ಶುಭಾಶಯ
ಪ್ರಧಾನಿ ನರೇಂದ್ರ ಮೋದಿ ದೂರದೃಷ್ಟಿ, ದೃಢಸಂಕಲ್ಪ, ದೃಢವಾದ ನಾಯಕತ್ವದಿಂದ ಅಮೃತಕಾಲದಲ್ಲಿ ಭಾರತದ ಸರ್ವಾಂಗೀಣ ಅಭಿವೃದ್ಧಿಗೆ ನಾಂದಿ ಹಾಡಲಿ ಎಂಬುದು ನನ್ನ ಶುಭ ಹಾರೈಕೆ ನೀವು ಯಾವಾಗಲೂ ಆರೋಗ್ಯವಾಗಿ, ಸಂತೋಷವಾಗಿರಲೆಂದು ಹಾರೈಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಗೃಹ ಸಚಿವ ಅಮಿತ್ ಶಾರಿಂದ ಶುಭಾಶಯ
ದಣಿವರಿಯದ ವ್ಯಕ್ತಿ, ನಿಸ್ವಾರ್ಥ ಸೇವೆಯ ಮೂಲಕ ಕೋಟ್ಯಂತರ ಜನರ ಜೀವನದಲ್ಲಿ ಸಮೃದ್ಧಿ ಹಾಗೂ ವಿಶ್ವಾಸವನ್ನು ತಂದ ದೇಶದ ಜನಪ್ರಿಯ ಪ್ರಧಾನಿಗೆ ಹುಟ್ಟುಹಬ್ಬದ ಶುಭಾಶಯ ಎಂದು ಟ್ವಿಟರ್ ನಲ್ಲಿ ಶಾ ಶುಭಾಶಯ ಕೋರಿದ್ದಾರೆ.
ಸಚಿವ ರಾಜ್ನಾಥ್ ಸಿಂಗ್ ಅಭಿನಂದನೆ
ಭಾರತದ ಯಶಸ್ವಿ ಮತ್ತು ಕಟ್ಟಪಟ್ಟು ದುಡಿಯುವ ಪ್ರಧಾನಿ ಮೋದಿಗೆ ಹುಟ್ಟು ಹಬ್ಬದ ಶುಭಾಶಯಗಳು, ಮೋದಿಯವರು ಭಾರತಕ್ಕೆ ಹೊಸ ಗುರುತನ್ನು ನೀಡಿದ್ದು, ಮಾತ್ರವಲ್ಲದೆ ಇಡೀ ವಿಶ್ವದಲ್ಲಿ ಅದರ ಘನತೆಯನ್ನು ಹೆಚ್ಚಿಸಿದ್ದಾರೆ ಎಂದರು.
ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾರಿಂದ ಶುಭಾಶಯ
ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಪ್ರಧಾನಿ ಮೋದಿಗೆ ಶುಭಾಶಯ ಕೋರಿದ್ದಾರೆ, ವಿಶ್ವದ ಜನಪ್ರಿಯ ನಾಯಕ ಮೋದಿ, ನೀವು ಭಾರತೀಯ ಸಂಸ್ಕೃತಿಯ ಜಾಗತಿಕ ಪ್ರತಿಷ್ಠೆ, ಜನರ ಬಹು ಆಯಾಮದ ಅಭಿವೃದ್ಧಿ ಮತ್ತು ರಾಷ್ಟ್ರದ ಸಾರ್ವತ್ರಿಕ ಪ್ರಗತಿಗೆ ಒಳ್ಳೆಯ ರೂಪವನ್ನು ನೀಡಿದ್ದೀರಿ ಎಂದಿದ್ದಾರೆ.