ನವದೆಹಲಿ, ಸೆಪ್ಟೆಂಬರ್ 15: ಬಹಳ ಜನಪ್ರಿಯವಾಗುತ್ತಿರುವ ಸಾವರೀನ್ ಗೋಲ್ಡ್ ಬಾಂಡ್ ಸ್ಕೀಮ್ನ ಈ ಹಣಕಾಸು ವರ್ಷದ ಎರಡನೇ ಸರಣಿಯಲ್ಲಿ ಹೂಡಿಕೆ ಮಾಡಲು ಇಂದು ಕೊನೆಯ ದಿನವಾಗಿದೆ. ಸೆಪ್ಟೆಂಬರ್ 11ರಂದು ಶುರುವಾದ ಎರಡನೇ ಸರಣಿಯ ಹೂಡಿಕೆ ಅವಕಾಶ ಇಂದು (ಸೆ. 15) ಕೊನೆಗೊಳ್ಳುತ್ತದೆ. ಸೆಪ್ಟೆಂಬರ್ 20ಕ್ಕೆ ಗೋಲ್ಡ್ ಬಾಂಡ್ ವಿತರಣೆ ಮಾಡಲಾಗುತ್ತದೆ. 2023-24ರ ಮೊದಲ ಸರಣಿ ಜೂನ್ 19ರಿಂದ 23ರವರೆಗೆ ಇತ್ತು. ಜೂನ್ 27ಕ್ಕೆ ಬಾಂಡ್ಗಳನ್ನು ವಿತರಿಸಲಾಗಿತ್ತು. ಈಗ ಎರಡನೇ ಸರಣಿಯಲ್ಲಿ ಹೂಡಿಕೆ ಮಾಡಬಹುದಾಗಿದೆ.
ಏನಿದು ಸಾವರೀನ್ ಗೋಲ್ಡ್ ಬಾಂಡ್ ಸ್ಕೀಮ್?
ಚಿನ್ನದ ಮೇಲೆ ಹೂಡಿಕೆ ಮಾಡಲು ಸರ್ಕಾರ ರೂಪಿಸಿರುವ ಸ್ಕೀಮ್ ಇದಾಗಿದೆ. ವೈಯಕ್ತಿಕವಾಗಿ ಒಂದು ಗ್ರಾಮ್ನಿಂದ 4 ಕಿಲೋ ಚಿನ್ನದವರೆಗೆ ಹೂಡಿಮೆ ಮಾಡಲು ಅವಕಾಶ ಇದೆ. ಭೌತಿಕ ಚಿನ್ನ ದೊರಕುವುದಿಲ್ಲ. ಆದರೆ, ಭೌತಿಕ ಚಿನ್ನದ ಬೆಲೆಗೆ ಅನುಗುಣವಾಗಿ ನಿಮಗೆ ರಿಟರ್ನ್ ಸಿಗುತ್ತದೆ. ಅಂದರೆ ಇವತ್ತು ನೀವು ನಿರ್ದಿಷ್ಟ ಬೆಲೆಗೆ ಚಿನ್ನ ಖರೀದಿಸಿ, 8 ವರ್ಷದ ಬಳಿಕ ಭೌತಿಕ ಚಿನ್ನದ ಮಾರುಕಟ್ಟೆ ದರ ಎಷ್ಟಿದೆಯೋ ಅಷ್ಟು ಮೊತ್ತ ನಿಮ್ಮ ಕೈಸೇರುತ್ತದೆ.
ಗೋಲ್ಡ್ ಬಾಂಡ್: ಗ್ರಾಮ್ಗೆ 5,923 ರೂ
ಎರಡನೇ ಸರಣಿಯ ಗೋಲ್ಡ್ ಬಾಂಡ್ ಸ್ಕೀಮ್ನಲ್ಲಿ ಒಂದು ಗ್ರಾಮ್ ಚಿನ್ನಕ್ಕೆ ಆರ್ಬಿಐ 5,923 ರೂ ಎಂದು ನಿಗದಿ ಮಾಡಿದೆ. ಈ ದರದ ಪ್ರಕಾರ ನೀವು 4 ಕಿಲೋವರೆಗೆ ಚಿನ್ನದ ಮೇಲೆ ಹೂಡಿಕೆ ಮಾಡಬಹುದು. ಒಂದು ವೇಳೆ ನೀವು ಆನ್ಲೈನ್ನಲ್ಲಿ ಹಣ ಪಾವತಿ ಮಾಡುವುದಾದರೆ ಗ್ರಾಮ್ಗೆ 50 ರೂ ರಿಯಾಯಿತಿ ಸಿಗುತ್ತದೆ. ಅಂದರೆ ನೀವು ಗ್ರಾಮ್ಗೆ 5,873 ರೂನಂತೆ ಚಿನ್ನದ ಮೇಲೆ ಹೂಡಿಕೆ ಮಾಡಬಹುದು.
ವೈಯಕ್ತಿಕವಾಗಿ ಒಂದು ವರ್ಷದ ಅವಧಿಯಲ್ಲಿ 4 ಕಿಲೋ ಚಿನ್ನದವರೆಗೆ ಹೂಡಿಕೆ ಮಾಡಬಹುದು. ಟ್ರಸ್ಟ್ ಅದರೆ 20 ಕಿಲೋವರೆಗೆ ಅವಕಾಶ ಇರುತ್ತದೆ. ಇದು ಒಂದು ವರ್ಷದ ಹೂಡಿಕೆ. ಒಂದು ವರ್ಷದಲ್ಲಿ ವಿವಿಧ ಸರಣಿಗಳಲ್ಲಿ ಸ್ಕೀಮ್ ಅನ್ನು ಆರ್ಬಿಐ ಬಿಡುಗಡೆ ಮಾಡುತ್ತದೆ. ಆ ಎಲ್ಲಾ ಸರಣಿಗಳಲ್ಲೂ ಚಿನ್ನದ ಮೇಲೆ ಹೂಡಿಕೆ ಮಾಡಬಹುದು. ಆದರೆ, ಎಲ್ಲಾ ಸರಣಿ ಸೇರಿ ಒಂದು ವರ್ಷದಲ್ಲಿ ಒಬ್ಬ ವ್ಯಕ್ತಿಗೆ ಇರುವ ಹೂಡಿಕೆ ಮಿತಿ 4 ಕಿಲೋ ಮಾತ್ರ.
ಎಂಟು ವರ್ಷಕ್ಕೆ ಮೆಚ್ಯೂರ್ ಆಗುತ್ತದೆ ಗೋಲ್ಡ್ ಬಾಂಡ್ :
ನೀವು ಈಗ ಗೋಲ್ಡ್ ಬಾಂಡ್ ಖರೀದಿಸಿದರೆ, ಎಂಟು ವರ್ಷದ ಬಳಿಕ, ಅಂದರೆ 2031ಕ್ಕೆ ಬಾಂಡ್ ಮೆಚ್ಯೂರ್ ಆಗುತ್ತದೆ. 2031ರಲ್ಲಿ ಚಿನ್ನದ ಮಾರುಕಟ್ಟೆ ಬೆಲೆ ಪ್ರಕಾರ ನಿಮ್ಮ ಹೂಡಿಕೆಯ ಮೌಲ್ಯ ಬದಲಾಗಿರುತ್ತದೆ. ಒಂದು ವೇಳೆ ನೀವು ಮುಂಚಿತವಾಗಿ ಬಾಂಡ್ ಸ್ಕೀಮ್ ಹಿಂಪಡೆಯಬೇಕೆಂದರೆ ಅದಕ್ಕೂ ಅವಕಾಶಗಳಿವೆ. ಆದರೆ, ಬಾಂಡ್ ಪಡೆದು ಕನಿಷ್ಠ 5 ವರ್ಷವಾದ ಬಳಿಕವಷ್ಟೇ ಮುಂಚಿತವಾಗಿ ಹಿಂಪಡೆಯಬಹುದು.
ಸಾವರೀನ್ ಗೋಲ್ಡ್ ಬಾಂಡ್: ಬಡ್ಡಿ ಸಿಗುತ್ತೆ
ಸಾವರೀನ್ ಗೋಲ್ಡ್ ಬಾಂಡ್ ಮೇಲೆ ನೀವು ಹೂಡಿಕೆ ಮಾಡಿದರೆ, ಚಿನ್ನದ ಬೆಲೆ ಏರಿಕೆಯಿಂದ ಸಿಗುವ ಲಾಭದ ಜೊತೆಗೆ ಕಾಲಕಾಲಕ್ಕೆ ಬಡ್ಡಿಯೂ ಪ್ರಾಪ್ತವಾಗುತ್ತದೆ. ವರ್ಷಕ್ಕೆ ಶೇ. 2.5ರ ದರದಲ್ಲಿ ಬಡ್ಡಿ ಕೊಡಲಾಗುತ್ತದೆ. ಆರು ತಿಂಗಳಿಗೊಮ್ಮೆ ಹೂಡಿಕೆದಾರರ ಖಾತೆಗೆ ಬಡ್ಡಿ ಹಣ ವರ್ಗಾವಣೆ ಆಗುತ್ತದೆ. ಆದರೆ, ಈ ಬಡ್ಡಿ ಹಣಕ್ಕೆ ತೆರಿಗೆ ಅನ್ವಯ ಆಗುತ್ತದೆ.
ಬಡ್ಡಿಹಣಕ್ಕೆ ಮಾತ್ರವೇ ತೆರಿಗೆ ವಿಧಿಸಲಾಗುವುದು. ನಿಮ್ಮ ಹೂಡಿಕೆಯ ಮೇಲೆ ತೆರಿಗೆ ಕಡಿತ ಇರುವುದಿಲ್ಲ. ನೀವು ಬಾಂಡ್ ಹಿಂಪಡೆಯುವಾಗ ಸಿಗುವ ಲಾಭಕ್ಕೂ ಯಾವ ತೆರಿಗೆ ಇರುವುದಿಲ್ಲ.
ಚಿನ್ನಕ್ಕೆ ಯಾವತ್ತಿದ್ದರೂ ಚಿನ್ನದ ಬೆಲೆ
ಭೂಮಿಯಂತೆ ಚಿನ್ನಕ್ಕೂ ಯಾವತ್ತಿದ್ದರೂ ಬೇಡಿಕೆ ಇದ್ದೇ ಇರುತ್ತದೆ. ಸಾಮಾನ್ಯವಾಗಿ ಇದರ ಬೆಲೆ ವರ್ಷಕ್ಕೆ ಶೇ. 10ರಿಂದ 15ರಷ್ಟು ಬೆಳೆಯುತ್ತದೆ. ಹೀಗಾಗಿ, ಸಾವರೀನ್ ಗೋಲ್ಡ್ ಬಾಂಡ್ ಮೇಲಿನ ಹೂಡಿಕೆಯಿಂದ ಸಾಕಷ್ಟು ಲಾಭ ನಿರೀಕ್ಷಿಸಬಹುದು.