ಬೆಂಗಳೂರು, ಸೆ.14: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ(Bengaluru) ಕಳೆದ ಕೆಲವು ದಿನಗಳಲ್ಲಿ 4,000 ಕ್ಕೂ ಹೆಚ್ಚು ಡೆಂಗ್ಯೂ(Dengue) ಪ್ರಕರಣಗಳು ವರದಿಯಾಗಿವೆ. ಅದರಲ್ಲೂ ಮಕ್ಕಳಲ್ಲಿ ಹೆಚ್ಚಿನ ಪ್ರಮಾಣ ಸೋಂಕು ಕಂಡು ಬಂದಿದ್ದು ಆತಂಕಕ್ಕೆ ಕಾರಣವಾಗಿದೆ. ಡೆಂಗ್ಯೂ ಸೋಂಕಿನಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆಯ ಕುರಿತು ಆರೋಗ್ಯ ಇಲಾಖೆ ಇದುವರೆಗೂ ಡೇಟಾವನ್ನು ಬಿಡುಗಡೆ ಮಾಡಿಲ್ಲ. ಆದರೆ ತೀವ್ರ ಜ್ವರದಿಂದ ಬಳಲುತ್ತಿರುವ ಮಕ್ಕಳು ಆಸ್ಪತ್ರೆಗೆ ದಾಖಲಾಗುತ್ತಿರುವ ಸಂಖ್ಯೆ ಹೆಚ್ಚಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಕಳೆದ ಕೆಲವು ದಿನಗಳಿಂದ 103 ಡಿಗ್ರಿ, 104 ಡಿಗ್ರಿ ಜ್ವರದಿಂದ ಬಳಲುತ್ತಿರುವ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಪ್ರಸ್ತುತ ನಮ್ಮ ವಾರ್ಡ್‌ಗಳಲ್ಲಿ 12 ಮಕ್ಕಳು ಡೆಂಗ್ಯೂ ಪೀಡಿತರಾಗಿದ್ದಾರೆ ಎಂದು ಆತ್ರೇಯಾ ಆಸ್ಪತ್ರೆಯ ಸಂಸ್ಥಾಪಕ ಮತ್ತು ವೈದ್ಯಕೀಯ ನಿರ್ದೇಶಕ ಡಾ.ನಾರಾಯಣಸ್ವಾಮಿ ತಿಳಿಸಿದರು.
ತಣ್ಣನೆಯ ಕೈಗಳು ಮತ್ತು ಪಾದಗಳು ಗಂಭೀರ ಅನಾರೋಗ್ಯದ ಸಂಕೇತವಾಗಬಹುದು. ಈಡಿಸ್ ಎಂಬ ಸೊಳ್ಳೆಗಳಿಂದ ಹರಡುವ ವೈರಲ್ ಸೋಂಕಿನಿಂದ ಡೆಂಗ್ಯೂ ಉಂಟಾಗುತ್ತದೆ. ಅಧಿಕ ಜ್ವರ ಹಾಗು ದೇಹದಲ್ಲಿ ನೋವು ಡೆಂಗ್ಯೂವಿನ ರೋಗಲಕ್ಷಣಗಳು. ಡೆಂಗ್ಯೂ ನಿರ್ಣಾಯಕ ಹಂತವನ್ನು ತಲುಪಿದ ನಂತರ, ರಕ್ತನಾಳಗಳಲ್ಲಿನ ದ್ರವಗಳು ಸೋರಿಕೆಯಾಗಲು ಪ್ರಾರಂಭಿಸುತ್ತವೆ. ಅದರ ಪರಿಣಾಮವಾಗಿ, ರಕ್ತವು ಕೇಂದ್ರೀಕೃತವಾಗಿರುತ್ತದೆ ಮತ್ತು ಪರಿಚಲನೆ ನಿಧಾನವಾಗುತ್ತದೆ. ಈ ಕಾರಣದಿಂದಾಗಿ ಪಾದ, ಮೂಗಿನ ತುದಿ, ಅಂಗೈಗಳಿಗೆ ಸಮರ್ಪಕವಾಗಿ ರಕ್ತ ಪೂರೈಕೆ ಆಗುವುದಿಲ್ಲ. “ನೀವು ನಿಮ್ಮ ಮಗುವಿನ ಕೈಯನ್ನು ನಿಮ್ಮ ಬೆರಳುಗಳಿಂದ ಹಿಸುಕಿದರೆ ಮತ್ತು ಮೂರು ಸೆಕೆಂಡುಗಳ ನಂತರ ಅದನ್ನು ಬಿಟ್ಟರೆ, ಸಾಮಾನ್ಯ ಬಣ್ಣವು ಹಿಂತಿರುಗದ ಕಾರಣ ನೀವು ಗುರುತುಗಳನ್ನು ಗಮನಿಸಬಹುದು. ಇದರಿಂದ ನಿಮ್ಮ ಮಗುವಿನ ಕೈಗೆ ರಕ್ತ ಸರಿಯಾದ ರೀತಿಯಲ್ಲಿ ಪೂರೈಕೆಯಾಗುತ್ತಿಲ್ಲ ಎಂಬುದನ್ನು ಗಮನಿಸಬಹುದು. ಮತ್ತು ಮಗುವಿಗೆ ಕಣ್ಣುಗಳ ಸುತ್ತ ಪಫಿನೆಸ್ ಅಥವಾ ಹೊಟ್ಟೆ ನೋವು ಕಾಣಿಸುತ್ತದೆ. ಆಗ ರಕ್ತ ಪರೀಕ್ಷೆ ಮಾಡಿಸಲೇ ಬೇಕು. ನಿರ್ಲಕ್ಷ್ಯ ಮಾಡುವಂತಿಲ್ಲ ಎಂದು DHEE ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಹಿರಿಯ ಸಲಹೆಗಾರ ಶಿಶುವೈದ್ಯರು ಮತ್ತು ಮಕ್ಕಳ ತಜ್ಞರು ಆದ ಡಾ ಸುಪ್ರಜಾ ಚಂದ್ರಶೇಖರ್ ತಿಳಿಸಿದರು.
ಮೂರು ಅಥವಾ ಹೆಚ್ಚು ಬಾರಿ ವಾಂತಿ ಆಗುವುದು, ಅಲರ್ಜಿ, ಅಥವಾ ರಕ್ತಸ್ರಾವದಂತಹ ರೋಗಲಕ್ಷಣಗಳು ಕಂಡು ಬಂದರೆ ನಿರ್ಲಕ್ಷಿಸಬಾರದು. ಇಂತಹ ರೋಗಲಕ್ಷಣಗಳಿರುವ ಮಕ್ಕಳಿಗೆ ಚಿಕಿತ್ಸೆ ಅಗತ್ಯ. ಇನ್ನು ಚಿಕಿತ್ಸೆ ಶುರು ಮಾಡಿ ಐದನೇ ದಿನದ ನಂತರವೂ ಜ್ವರ ಕಡಿಮೆಯಾಗದಿದ್ದರೆ, ಮಗುವನ್ನು ಆಸ್ಪತ್ರೆಗೆ ದಾಖಲಿಸಬೇಕು ಎಂದರು.