ಗಲ್ಲಾಪೆಟ್ಟಿಗೆಯಲ್ಲಿ ‘ಜವಾನ್’ ಸಿನಿಮಾ ಅಬ್ಬರಿಸುತ್ತಿದೆ. ಈ ಸಿನಿಮಾದ ಕ್ರೇಜ್ನಿಂದ ಅನೇಕ ಚಿತ್ರಗಳ ದಾಖಲೆಗಳು ಪುಡಿ ಆಗುತ್ತಿವೆ. ಸೆಪ್ಟೆಂಬರ್ 7ರಂದು ‘ಜವಾನ್’ ಬಿಡುಗಡೆ ಆಯಿತು. ಶಾರುಖ್ ಖಾನ್ ಅಭಿಮಾನಿಗಳು ಈ ಸಿನಿಮಾಗೆ ದೊಡ್ಡ ಮಟ್ಟದ ಓಪನಿಂಗ್ ನೀಡಿದರು. ಅಂದಿನಿಂದ ಪ್ರತಿದಿನವೂ ಈ ಸಿನಿಮಾ ಸದ್ದು ಮಾಡುತ್ತಲೇ ಇದೆ. ಬಾಕ್ಸ್ ಆಫೀಸ್ ಕಲೆಕ್ಷನ್ ವಿಚಾರದಲ್ಲಿ ಈ ಚಿತ್ರ ಹೊಸ ಹೊಸ ದಾಖಲೆಗಳನ್ನು ಬರೆಯುತ್ತಿದೆ. ಅಚ್ಚರಿ ಎಂದರೆ ಅತಿ ವೇಗವಾಗಿ 250 ಕೋಟಿ ರೂಪಾಯಿ ಗಳಿಸಿದ ಹಿಂದಿ ಸಿನಿಮಾ ಎಂಬ ಖ್ಯಾತಿಗೆ ‘ಜವಾನ್’ ಪಾತ್ರವಾಗಿದೆ. ಈ ವಿಚಾರದಲ್ಲಿ ‘ಕೆಜಿಎಫ್ 2’ ಮತ್ತು ‘ಬಾಹುಬಲಿ 2’ ಸಿನಿಮಾದ ಹಿಂದಿ ವರ್ಷನ್ ಅನ್ನು ‘ಜವಾನ್’ ಮೀರಿಸಿದೆ.
ದಕ್ಷಿಣ ಭಾರತದ ‘ಕೆಜಿಎಫ್ 2’, ‘ಬಾಹುಬಲಿ 2’ ಮುಂತಾದ ಸಿನಿಮಾಗಳು ಹಿಂದಿಗೂ ಡಬ್ ಆಗಿ ತೆರೆಕಂಡು ಉತ್ತಮವಾಗಿ ಕಮಾಯಿ ಮಾಡಿದ್ದವು. ಆ ಚಿತ್ರಗಳ ಗಳಿಕೆಗೆ ಹೋಲಿಸಿದರೆ ‘ಜವಾನ್’ ಸಿನಿಮಾ ಬಹಳ ವೇಗವಾಗಿ ನೂರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡುತ್ತಿದೆ. ಈ ವಿಚಾರದಲ್ಲಿ ಶಾರುಖ್ ಖಾನ್ ಅವರು ಹೊಸ ದಾಖಲೆ ಬರೆದಿದ್ದಾರೆ. ಹಿಂದಿ ಮಾರುಕಟ್ಟೆಯಲ್ಲಿ 250 ಕೋಟಿ ರೂಪಾಯಿ ಗಳಿಸಲು ‘ಕೆಜಿಎಫ್ 2’ ಸಿನಿಮಾ 7 ದಿನಗಳನ್ನು ತೆಗೆದುಕೊಂಡಿತ್ತು. ‘ಬಾಹುಬಲಿ 2’ ಸಿನಿಮಾಗೆ 8 ದಿನ ಹಿಡಿದಿತ್ತು. ಆದರೆ ‘ಜವಾನ್’ ಸಿನಿಮಾ ಕೇವಲ ನಾಲ್ಕೇ ದಿನದಲ್ಲಿ 250 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
‘ಜವಾನ್’ ಸಿನಿಮಾಗೆ ಅಟ್ಲಿ ನಿರ್ದೇಶನ ಮಾಡಿದ್ದಾರೆ. ಶಾರುಖ್ ಖಾನ್ ಜೊತೆ ವಿಜಯ್ ಸೇತುಪತಿ, ದೀಪಿಕಾ ಪಡುಕೋಣೆ, ಸುನಿಲ್ ಗ್ರೋವರ್, ಸಂಜಯ್ ದತ್, ನಯನತಾರಾ, ಪ್ರಿಯಾಮಣಿ, ಸಾನ್ಯಾ ಮಲ್ಹೋತ್ರಾ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಅನಿರುದ್ಧ್ ರವಿಚಂದರ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ವಿಶ್ವಾದ್ಯಂತ ಹಿಂದಿ, ತಮಿಳು, ತೆಲುಗು ವರ್ಷನ್ ಸೇರಿ ಈ ಸಿನಿಮಾಗೆ ನಾಲ್ಕು ದಿನದಲ್ಲಿ 520 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಆಗಿದೆ.