ನವದೆಹಲಿ: ವಿಶ್ವಬ್ಯಾಂಕ್ ಅಧ್ಯಕ್ಷ ಅಜಯ್ ಬಾಂಗ ಮತ್ತು ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ ಅಧ್ಯಕ್ಷ ಮಸಸುಗು ಅಸಾಕಾವ ಅವರು ನಿನ್ನೆ ಭಾನುವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿದ್ದಾರೆ. ಜಿ20 ನಾಯಕರ ಶೃಂಗಸಭೆಗೆ ಅವರಿಬ್ಬರು ರಾಷ್ಟ್ರರಾಜಧಾನಿಗೆ ಆಗಮಿಸಿದ್ದರು. ಈ ವೇಳೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ, ಜಿ20 ಸಭೆ ಯಶಸ್ವಿಯಾಗಿ ನಡೆಸಿದ್ದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಈ ಎರಡು ಭೇಟಿಯ ಬಗ್ಗೆ ಕೇಂದ್ರ ಹಣಕಾಸು ಸಚಿವಾಲಯದ ಎಕ್ಸ್ ಖಾತೆಯಲ್ಲಿ ವಿವರ ಪ್ರಕಟಿಸಲಾಗಿದೆ.
ಎಡಿಬಿ ಅಧ್ಯಕ್ಷ ಮಸಾಸುಗು ಅಸಾಕಾವ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಬ್ಬರೂ ಕೂಡ ಭಾರತದ ಅಧ್ಯಕ್ಷತೆಯಲ್ಲಿ ನಡೆದ ಜಿ20 ಸಭೆಯ ಪರಿಣಾಮಗಳು ಹಾಗೂ ಜಿ20 ಕಾರ್ಯಗಳಿಗೆ ಎಡಿಬಿ ಬ್ಯಾಂಕ್ನ ಕೊಡುಗೆ ಬಗ್ಗೆ ಮಾತನಾಡಿದರು. ಈ ವೇಳೆ, ಕೇಂದ್ರ ಸರ್ಕಾರದ ಪಿಎಂ ಗತಿಶಕ್ತಿ, ಗಿಫ್ಟ್ ಸಿಟಿ, ಗ್ರೀನ್ ಹೈಡ್ರೋಜನ್ ಹಬ್ ಇತ್ಯಾದಿ ಯೋಜನೆಗಳಿಗೆ ಧನಸಹಾಯದ ಭರವಸೆಯನ್ನು ನೀಡಿದರೆಂದು ಹೇಳಲಾಗಿದೆ.
ಇನ್ನು, ವರ್ಲ್ಡ್ ಬ್ಯಾಂಕ್ ಅಧ್ಯಕ್ಷ ಅಜಯ್ ಬಾಂಗಾ ಅವರು ಸಾಮಾಜಿಕ ಕಾರ್ಪೊರೇಟ್ ಜವಾಬ್ದಾರಿ (ಸಿಎಸ್ಆರ್) ಯೋಜನೆಗೆ ಮಾರುಕಟ್ಟೆ ಸ್ವರೂಪವನ್ನು ತಂದು ಆ ಮೂಲಕ ಸಾಮಾಜಿಕ ಪರಿಣಾಮವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಆರ್ಥಿಕ ವ್ಯವಹಾರಗಳ ಸಚಿವಾಲಯ ಮತ್ತು ಹಣಕಾಸು ಸಚಿವಾಲಯಗಳ ಜೊತೆ ಸೇರಿ ಕೆಲಸ ಮಾಡಲು ಒಪ್ಪಿದ್ದಾರೆ.
ಇನ್ನು, ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕುಗಳನ್ನು (ಎಂಡಿಬಿ) ಬಲಪಡಿಸಲು ಸ್ವತಂತ್ರ ತಜ್ಞರ ಗುಂಪಿನ ಮೊದಲ ಸಂಚಿಕೆಯಲ್ಲಿ ತಿಳಿಸಲಾಗಿರುವ ಮೂರು ಅಜೆಂಡಾದ ಶಿಫಾರಸುಗಳನ್ನು ಅಜಯ್ ಬಾಂಗಾ ಅವರು ಪರಿಗಣಿಸಿ ಮುಂದುವರಿಸುತ್ತಾರೆಂದು ಈ ವೇಳೆ ನಿರ್ಮಲಾ ಸೀತಾರಾಮನ್ ನಿರೀಕ್ಷಿಸಿದ್ದಾರೆ.
ಭಾರತದ ಅಧ್ಯಕ್ಷತೆಯಲ್ಲಿ ನಡೆದ ಈ ವರ್ಷದ ಜಿ20 ಶೃಂಗಸಭೆ ಹಲವು ವಿಚಾರಗಳಿಗೆ ಹೆಸರುಪಡೆದುಕೊಂಡಿದೆ. ಸೆಪ್ಟೆಂಬರ್ 9 ಮತ್ತು 10ರಂದು ಎರಡು ದಿನಗಳ ಕಾಲ ಜಿ20 ನಾಯಕರ ಶೃಂಗಸಭೆ ನಡೆದು ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಮುಂದಿನ ವರ್ಷದ ಜಿ20 ಸಭೆ ಬ್ರೆಜಿಲ್ ದೇಶದ ಅಧ್ಯಕ್ಷತೆಯಲ್ಲಿ ನಡೆಯಲಿದೆ.