ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳಲ್ಲಿ ಸಿಬ್ಬಂದಿಗೆ ಮೂರು ತಿಂಗಳಿಂದ ಸಂಬಳವೇ ಆಗಿಲ್ಲ ಎಂದ ಸ್ಪೀಕರ್ ಯುಟಿ ಖಾದರ್, ವಿಶ್ವವಿದ್ಯಾನಿಲಯದಲ್ಲಿ ಶಿಕ್ಷಣದ ಗುಣಮಟ್ಟ ಯಾಕೆ ಕುಸಿದಿದೆ? ಅಲ್ಲಿನ ಅನುದಾನವನ್ನು ಬೇರೆ ಯಾವುದಕ್ಕೋ ಕೊಟ್ಟು ಈಗ ಹಣ ಇಲ್ಲದಾಗಿದೆ. ನಿವೃತ್ತಿಯಾದ ಉಪನ್ಯಾಸಕರಿಗೆ ಪಿಂಚಣಿ ಕೊಡುವ ಗತಿಯಿಲ್ಲ. ಇದರ ಬಗ್ಗೆ ಯಾವುದೇ ಜನಪ್ರತಿನಿಧಿಗೆ ಕಾಳಜಿ ಇದೆಯೇ? ಎಂದು ಕಿಡಿಕಾರಿದರು.

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ (Mangaluru University) ಉಂಟಾಗಿರುವ ಗಣೇಶೋತ್ಸವ ಆಚರಣೆಯ ವಿವಾದಕ್ಕೆ ಸಂಬಂಧಿಸಿದಂತೆ ವಿಧಾನಸಭಾ ಸ್ಪೀಕರ್ ಯುಟಿ ಖಾದರ್ (UT Khader) ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ಮಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿರುವ ಸ್ಪೀಕರ್ ಯುಟಿ ಖಾದರ್, ಮಂಗಳೂರು ಯುನಿವರ್ಸಿಟಿಗೆ ಒಳ್ಳೆಯ ಇತಿಹಾಸ ಇದೆ. ಎ ಗ್ರೇಡ್ ಇದ್ದ ಯುನಿವರ್ಸಿಟಿಗೆ ಕಳೆದ ಎರಡು ವರ್ಷದಲ್ಲಿ ಬಿ ಗ್ರೇಡ್ ಬಂದಿದೆ. ವಿಶ್ವ ವಿದ್ಯಾಲಯದಲ್ಲಿ ಕಳೆದ ವರ್ಷದ ಪದವಿ ಫಲಿತಾಂಶ ಇನ್ನೂ ಬಂದಿಲ್ಲ. ವಿದ್ಯಾರ್ಥಿಗಳು ಮುಂದಿನ ಶಿಕ್ಷಣದ ಬಗ್ಗೆ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಹೇಳಿದರು.
ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳಲ್ಲಿ ಸಿಬ್ಬಂದಿಗೆ ಮೂರು ತಿಂಗಳಿಂದ ಸಂಬಳವೇ ಆಗಿಲ್ಲ ಎಂದ ಸ್ಪೀಕರ್ ಯುಟಿ ಖಾದರ್, ವಿಶ್ವವಿದ್ಯಾನಿಲಯದಲ್ಲಿ ಶಿಕ್ಷಣದ ಗುಣಮಟ್ಟ ಯಾಕೆ ಕುಸಿದಿದೆ? ಅಲ್ಲಿನ ಅನುದಾನವನ್ನು ಬೇರೆ ಯಾವುದಕ್ಕೋ ಕೊಟ್ಟು ಈಗ ಹಣ ಇಲ್ಲದಾಗಿದೆ. ನಿವೃತ್ತಿಯಾದ ಉಪನ್ಯಾಸಕರಿಗೆ ಪಿಂಚಣಿ ಕೊಡುವ ಗತಿಯಿಲ್ಲ. ಇದರ ಬಗ್ಗೆ ಯಾವುದೇ ಜನಪ್ರತಿನಿಧಿಗೆ ಕಾಳಜಿ ಇದೆಯೇ? ಇವರು ಯಾಕೆ ಮಾತಾಡಲ್ಲ? ವಿಶ್ವವಿದ್ಯಾನಿಲಯದಲ್ಲಿ ಶಿಕ್ಷಣದ ಗುಣಮಟ್ಟ ಕಾಪಾಡಿಕೊಂಡು ಆಡಳಿತ ನಡೆಸಬೇಕು ಎಂದು ಹೇಳಿದರು.
ಇನ್ನು ಗಣೇಶೋತ್ಸವ ಅಲ್ಲಿನ ಮಕ್ಕಳು, ಸಿಬ್ಬಂದಿ ಮಾಡುತ್ತಾರೆ, ಹೊರಗಿನವರಿಗೆ ಯಾಕೆ ಚಿಂತೆ? ಎಂದು ಪ್ರಶ್ನಿಸಿದ ಯುಟಿ ಖಾದರ್, ಹೊರಗಿನವರು ಅಲ್ಲಿ ಹೋಗಿ ಯಾಕೆ ರಾಜಕೀಯ ಮಾಡಬೇಕು? ವಿಶ್ವವಿದ್ಯಾನಿಲಯದ ನಿಯಮ ಪ್ರಕಾರ ಉಪ ಕುಲಪತಿ ನಡೆದುಕೊಳ್ಳುತ್ತಾರೆ ಎಂದು ಬಿಜೆಪಿ ನಾಯಕರ ರಾಜಕೀಯಕ್ಕೆ ಸ್ಪೀಕರ್ ಯುಟಿ ಖಾದರ್ ಪರೋಕ್ಷವಾಗಿ ಟಾಂಗ್ ನೀಡಿದರು.
ಇತ್ತೀಚೆಗೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಗಣೇಶೋತ್ಸವ ವಿಚಾರದಲ್ಲಿ ಉಂಟಾಗಿದ್ದ ವಿವಾದಕ್ಕೆ ಸಂಬಂಧಪಟ್ಟಂತೆ ಮಂಗಳೂರು ವಿವಿಗೆ ಹೋಗಿದ್ದ ಬಿಜೆಪಿ ಶಾಸಕ ವೇದವ್ಯಾಸ ಕಾಮತ್, ಉಪಕುಲಪತಿಗೆ ಬೆದರಿಕೆ ಹಾಕಿದ್ದರು. ಈ ಬಗ್ಗೆ ಸ್ವತಃ ಉಪಕುಲಪತಿಯೇ ಸರ್ಕಾರಕ್ಕೆ ಪತ್ರ ಬರೆದು ದೂರು ನೀಡಿತ್ತು.