ಪಟ್ನಾ: ಮಾಜಿ ಸೈನಿಕನನ್ನು ಗುಂಡಿಕ್ಕಿ ಹತ್ಯೆಗೈದು ಪರಾರಿಯಾಗಲು ಯತ್ನಿಸಿದ ಇಬ್ಬರನ್ನು ಗ್ರಾಮಸ್ಥರು ಬಡಿದು ಹತ್ಯೆಗೈದ ಘಟನೆ ಬಿಹಾರದ ರೋಹ್ತಾಸ್ ಜಿಲ್ಲೆಯಲ್ಲಿ ನಡೆದಿದೆ. ಮತ್ತೋರ್ವ ದಾಳಿಕೋರನ ಮೇಲೂ ಗ್ರಾಮಸ್ಥರು ಹಲ್ಲೆ ನಡೆಸಿದ್ದು ಆತ ತೀವ್ರ ಅಸ್ವಸ್ಥಗೊಂಡಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತ ಮಾಜಿ ಸೈನಿಕನನ್ನು ಬಿಜೇಂದ್ರ ಸಿಂಗ್ (55) ಎಂದು ಗುರುತಿಸಲಾಗಿದೆ. ಗುಂಪಿನಿಂದ ಹತ್ಯೆಗೀಡಾದ ಇಬ್ಬರು ದಾಳಿಕೋರರನ್ನು ಮಿಥಿಲೇಶ್ ಕುಮಾರ್ (23) ಮತ್ತು ಆದಿತ್ಯ ಕುಮಾರ್ (25) ಎಂದು ಗುರುತಿಸಲಾಗಿದೆ. ಗಾಯಗೊಂಡವನನ್ನು ಅಜೀತ್ ಕುಮಾರ್ ಎಂದು ಗುರುತಿಸಲಾಗಿದೆ.
ಬೈಕ್‍ನಲ್ಲಿ ಬಂದಿದ್ದ ಮೂವರು ದುಷ್ಕರ್ಮಿಗಳು ನಿವೃತ್ತ ಸೇನಾ ಯೋಧನ ಮೇಲೆ ಗುಂಡು ಹಾರಿಸಿ ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಗ್ರಾಮಸ್ಥರು ಮೂವರು ದಾಳಿಕೋರರನ್ನು ಹಿಂಬಾಲಿಸಿ ಹಿಡಿದಿದ್ದಾರೆ. ಬಳಿಕ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಗ್ರಾಮಸ್ಥರು ದಾಳಿಕೋರರನ್ನು ಹಿಡಿದಾಗ ಗುಂಡು ಹಾರಿಸಲಾಗಿದ್ದು, ಅಂಕಿತ್ ಕುಮಾರ್ ಎಂಬಾತ ಗಾಯಗೊಂಡಿದ್ದಾನೆ.
ಮಾಜಿ ಸೈನಿಕನ ಹತ್ಯೆಯ ಹಿಂದಿನ ಕಾರಣ ಇನ್ನೂ ತಿಳಿದು ಬಂದಿಲ್ಲ. ಪ್ರಕರಣದ ತನಿಖೆಗೆ ಪೊಲೀಸರ ತಂಡ ರಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.