ಶಿವಮೊಗ್ಗ: ಚೈತ್ರಾ ಎಂಬ 5 ನೇ ತರಗತಿ ವಿದ್ಯಾರ್ಥಿನಿ ಕೋಟೆಗಂಗೂರಿನಲ್ಲಿ ರೈಲ್ವೆ ಕಾಮಗಾರಿಗಾಗಿ ರಸ್ತೆ ಮಧ್ಯದಲ್ಲಿ ತೆಗೆದಿದ್ದ ಗುಂಡಿಗೆ ಬಿದ್ದು ಬಾಲಕಿಯೊಬ್ಬಳು ಮೃತಪಟ್ಟ ಘಟನೆ ನಡೆದಿದೆ.
ಶಾಲೆಯಿಂದ ಬುಧವಾರ ಸಂಜೆ ಮನೆಗೆ ಬರುವ ವೇಳೆ ಪೋಷಕರು ಮನೆಗೆ ಬೀಗ ಹಾಕಿಕೊಂಡು ಹೊಲದಲ್ಲಿ ಕೆಲಸ ಮಾಡುತ್ತಿದ್ದರು. ಹೊಲಕ್ಕೆ ಹೋಗಿ ಬೀಗ ಪಡೆದುಕೊಂಡು ವಾಪಾಸ್ ಬರುವಾಗ ಬಾಲಕಿ ರೈಲ್ವೆ ಟರ್ಮಿನಲ್ ನಿರ್ಮಾಣಕ್ಕಾಗಿ ತೆಗೆದಿದ್ದ ಗುಂಡಿಗೆ ಬಿದ್ದಿದ್ದಾಳೆ ಎಂದು ತಿಳಿದು ಬಂದಿದೆ.
ಮಳೆಯಿಂದ ಗುಂಡಿಯಲ್ಲಿ ನೀರು ನಿಂತಿದ್ದರಿಂದ ಬಾಲಕಿಗೆ ಮೇಲೆ ಬರಲು ಸಾಧ್ಯವಾಗಿಲ್ಲ. ಇದರಿಂದ ಆಕೆ ಅಲ್ಲಿಯೇ ಮೃತಪಟ್ಟಿದ್ದಾಳೆ. ಬಳಿಕ ಕೆಲಸ ಮುಗಿಸಿಕೊಂಡು ಬಂದ ಬಾಲಕಿಯ ತಂದೆ-ತಾಯಿ ಮಗಳಿಗಾಗಿ ಹುಡುಕಾಡಿದ್ದಾರೆ. ಈ ವೇಳೆ ಚೈತ್ರಾ ಗುಂಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.
ರಸ್ತೆ ನಡುವೆ ಗುಂಡಿ ತೆಗೆದು ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದಿರುವುದೇ ಘಟನೆಗೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಘಟನೆಗೆ ಕಾರಣನಾದ ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಳ್ಳಬೇಕು. ಮೃತ ಚೈತ್ರಾ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಈ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.