ಲಕ್ನೋ: ಆಸ್ಟ್ರೇಲಿಯಾ ವಿಶ್ವಕಪ್ ಕ್ರಿಕೆಟ್‌ನ ಎರಡನೇ ಪಂದ್ಯದಲ್ಲೂ ಹೀನಾಯವಾಗಿ ಸೋತಿದೆ. ದಕ್ಷಿಣ ಆಫ್ರಿಕಾ 134 ರನ್‌ಗಳ ಜಯ ಸಾಧಿಸಿ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಜಿಗಿದಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ 7 ವಿಕೆಟ್ ನಷ್ಟಕ್ಕೆ 311 ರನ್ ಗಳಿಸಿತು. ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ 40.5 ಓವರ್‌ಗಳಲ್ಲಿ 177 ರನ್‌ಗಳಿಗೆ ಸರ್ವಪತನ ಕಂಡಿತು.
ಆಸ್ಟ್ರೇಲಿಯಾ ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತ್ತು. 70 ರನ್ ಗಳಿಸುವಷ್ಟರಲ್ಲಿ ಪ್ರಮುಖ 6 ವಿಕೆಟ್ ಕಳೆದುಕೊಂಡಿತ್ತು.
ಕಠಿಣ ಪರಿಸ್ಥಿತಿಯಲ್ಲಿ ಮಾರ್ನಸ್ ಲಾಬುಶೇನ್ 46 ರನ್ (74 ಎಸೆತ, 3 ಬೌಂಡರಿ), ಮಿಷೆಲ್ ಸ್ಟಾರ್ಕ್ 27 ರನ್ (51 ಎಸೆತ, 3 ಬೌಂಡರಿ), ನಾಯಕ ಪ್ಯಾಟ್ ಕಮ್ಮಿನ್ಸ್ 22 ರನ್(21 ಎಸೆತ, 4 ಬೌಂಡರಿ) ಹೊಡೆದು ಸ್ವಲ್ಪ ಪ್ರತಿರೋಧ ತೋರಿದರು.
ವೇಗದ ಬೌಲರ್ ಕಗಿಸೋ ರಬಡಾ 3 ವಿಕೆಟ್ ಪಡೆದರೆ ಜನ್‌ಸೆನ್, ಕೇಶವ್ ಮಹರಾಜ್, ತಬ್ರೇಜ್ ಶಂಶಿ ತಲಾ 2 ವಿಕೆಟ್ ಪಡೆದರು. ಲುಂಗಿ ಎನ್‌ಗಿಡಿ 1 ವಿಕೆಟ್ ಕಿತ್ತರು.
ಬ್ಯಾಟಿಂಗ್ ಆರಂಭಿಸಿದ ದಕ್ಷಿಣ ಆಫ್ರಿಕಾ ಪರ ಮೊದಲ ವಿಕೆಟಿಗೆ ಕೀಪರ್ ಕ್ವಿಂಟನ್ ಡಿ ಕಾಕ್ ಮತ್ತು ತೆಂಬಾ ಬವುಮಾ 108 ರನ್ ಜೊತೆಯಾಟವಾಡುವ ಮೂಲಕ ಭದ್ರ ಇನ್ನಿಂಗ್ಸ್ ಕಟ್ಟಿದರು. ಆಡೆನ್ ಮ್ಯಾಕ್ರಮ್ 56 ರನ್ (44 ಎಸೆತ, 7 ಬೌಂಡರಿ, 1 ಸಿಕ್ಸರ್) ಹೊಡೆದರೆ ಹೊಡೆದರೆ ಕ್ವಿಂಟನ್ ಡಿ ಕಾಕ್ ಈ ವಿಶ್ವಕಪ್‌ನಲ್ಲಿ ಎರಡನೇ ಶತಕ ಸಿಡಿಸಿದರು. 109 ರನ್( 106 ಎಸೆತ, 8 ಬೌಂಡರಿ, 5 ಸಿಕ್ಸ್) ಹೊಡೆದು ತಂಡದ ಮೊತ್ತ 197 ಗಳಿಸಿದ್ದಾಗ ಮೂರನೇಯವರಾಗಿ ಔಟಾದರು.