ಮಡಿಕೇರಿ: ಮನೆ ಮಠ ಇಲ್ಲದೆ ಒಪ್ಪೊತ್ತಿನ ಊಟಕ್ಕೂ ಪರದಾಡುತ್ತಿದ್ದ 32 ಹಿರಿ ಜೀವಗಳಿಗೆ ಆಧಾರಸ್ತಂಭವಾಗಿದ್ದರು. ತಮ್ಮ ಬಳಿ ಹಣ ಇರಲಿ ಇಲ್ಲದೇ ಹೋಗಲಿ ಆಶ್ರಯ ನೀಡಿ ಮೂರು ಹೊತ್ತು ಊಟ ಹಾಕಿ ತನ್ನ ಕುಟುಂಬ ಸದಸ್ಯರು ಎಂದೇ ಭಾವಿಸಿ ಅವರಿಗಾಗಿಯೇ ಜೀವನ ಮುಡಿಪಾಗಿಟ್ಟ ದಂಪತಿ ಇಂದು ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ. ಹೀಗಾಗಿ ಅವರನ್ನೆ ನಂಬಿಕೊಂಡು ಬದುಕಿನ ಬಂಡಿ ಸಾಗಿಸುತ್ತಿದ್ದ 32 ಹಿರಿಯ ಜೀವಗಳು ಇಂದು ನಿಜಕ್ಕೂ ಅನಾಥರಾಗಿದ್ದಾರೆ.
ಕೊಡಗು ಜಿಲ್ಲೆಯ ಮಡಿಕೇರಿ ನಿವಾಸಿ ರಮೇಶ್ ಮತ್ತು ಅವರ ಪತ್ನಿ ರೂಪಾ ಅವರು ಕಳೆದ 8 ವರ್ಷಗಳಿಂದ ವಿಕಾಸ್ ಜನಸೇವಾ ಟ್ರಸ್ಟ್ ಹೆಸರಿನ ಮೂಲಕ ಅನಾಥ ಆಶ್ರಮ ನಡೆಸುತ್ತಿದ್ದರು. ಸರ್ಕಾರದ ಯಾವುದೇ ಅನುದಾನವಿಲ್ಲದೆ ದಾನಿಗಳ ಸಹಾಯ ಮತ್ತು ಸ್ವಂತ ದುಡಿಮೆಯಿಂದ ಬಂದ ಹಣದಲ್ಲಿ 32 ಅನಾಥ ವೃದ್ಧರನ್ನು ಸಾಕಿ ಸಲಹುತ್ತಿದ್ದರು. ಆದರೆ ಅಕ್ಟೋಬರ್ 4 ರ ರಾತ್ರಿ ನಡೆದಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಪತಿ-ಪತ್ನಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಬಳಿಕ ಮೈಸೂರಿನ ಕೆಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತಿತ್ತು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮುಂಜಾನೆ ರಮೇಶ್ ಸಾವನ್ನಪ್ಪಿದ್ರು. ಇದಾದ ಬಳಿಕ ರಮೇಶ್ ಪತ್ನಿ ರೂಪ ಅವರು ಸೋಮವಾರ ರಾತ್ರಿ ಸುಮಾರು 11:30ರ ಸುಮಾರಿಗೆ ಸಾವನ್ನಪ್ಪಿದ್ದಾರೆ. ಇಬ್ಬರು ಒಟ್ಟಿಗೆ ಆಶ್ರಮ ಕೆಲಸ ಮಾಡಿಕೊಂಡು ಹಿರಿ ಜೀವಿಗಳಿಗೆ ಆಶ್ರಯ ನೀಡಿದ ಪತಿ-ಪತ್ನಿ ಇಬ್ಬರು ಮರಳಿ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ.