ಡೆಹ್ರಾಡೂನ್: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ಈ ವೇಳೆ ನೆರೆದಿದ್ದ ಜನರು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದರು ಮತ್ತು ಮುಖ್ಯಮಂತ್ರಿಗಳಿಗೆ ಶುಭಾಶಯ ಕೋರಿದರು. ಬದರಿ ಕೇದಾರ ದೇವಸ್ಥಾನ ಸಮಿತಿ ಅಧ್ಯಕ್ಷ ಅಜಯ್ ಅಜಯೇಂದ್ರ ಹಾಗೂ ಇತರ ಗಣ್ಯರು ಕೇದಾರನಾಥ ಹೆಲಿಪ್ಯಾಡ್‌ಗೆ ಆಗಮಿಸಿ ಪುಷ್ಪಗುಚ್ಛ ನೀಡಿ ಯೋಗಿ ಆದಿತ್ಯನಾಥ್ ಅವರನ್ನು ಬರಮಾಡಿಕೊಂಡರು.
ಅರ್ಚಕ ಸಮುದಾಯದವರು ಯೋಗಿ ಆದಿತ್ಯನಾಥ್ ಅವರನ್ನು ಸಾಂಪ್ರದಾಯಿಕ ಮಂತ್ರ ಪಠಣದೊಂದಿಗೆ ಅಭಿನಂದಿಸಿದರು. ಕೇದಾರನಾಥ ದೇಗುಲಕ್ಕೆ ಭೇಟಿ ನೀಡಿದ ಯೋಗಿ ಆದಿತ್ಯನಾಥ್ ದೇಶ ಮತ್ತು ರಾಜ್ಯದ ಜನತೆಯ ಒಳಿತಿಗಾಗಿ ಪ್ರಾರ್ಥಿಸಿದರು.
ಈ ಸಂದರ್ಭ ಉತ್ತರಪ್ರದೇಶ ಮುಖ್ಯ ಕಾರ್ಯದರ್ಶಿ ದುರ್ಗಾ ಶಂಕರ್ ಮಿಶ್ರಾ, ಪ್ರಧಾನ ಕಾರ್ಯದರ್ಶಿ ಸಂಜಯ್ ಪ್ರಸಾದ್ ಮತ್ತು ಪ್ರವಾಸೋದ್ಯಮ ಪ್ರಧಾನ ಕಾರ್ಯದರ್ಶಿ ಮುಖೇಶ್ ಮೆಶ್ರಾಮ್ ಉಪಸ್ಥಿತರಿದ್ದರು.