ಕಾಬೂಲ್: ಅಫ್ಘಾನಿಸ್ತಾನದ ಪಶ್ಚಿಮ ಭಾಗದಲ್ಲಿ ಶನಿವಾರ ಸಂಭವಿಸಿದ 6.3 ತೀವ್ರತೆಯ ಪ್ರಬಲ ಭೂಕಂಪನದಿಂದ ಕನಿಷ್ಠ 120 ಮಂದಿ ಸಾವನ್ನಪ್ಪಿದ್ದು, 1,000ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಭಾಗದ ಅತಿ ದೊಡ್ಡ ನಗರವಾದ ಹೆರಾತ್‌ನ ವಾಯವ್ಯ ಭಾಗದ 40 ಕಿಮೀ ದೂರದಲ್ಲಿ ಭೂಕಂಪನದ ಕೇಂದ್ರ ಬಿಂದು ಪತ್ತೆಯಾಗಿದೆ ಎಂದು ಅಮೆರಿಕದ ಜಿಯಾಲಾಜಿಕಲ್ ಸಮೀಕ್ಷಾ ಕೇಂದ್ರ ತಿಳಿಸಿದೆ. ರಿಕ್ಟರ್ ಮಾಪನದಲ್ಲಿ ಇದು 6.3 ತೀವ್ರತೆ ದಾಖಲಾಗಿದೆ. ಇದರ ನಂತರವೂ 4.3 ಮತ್ತು 6.3 ತೀವ್ರತೆಯ ಭೂಕಂಪ ಸಂಭವಿಸಿದೆ.
ಗಾಯಗೊಂಡ 1 ಸಾವಿರಕ್ಕೂ ಅಧಿಕ ಜನರಲ್ಲಿ ಮಹಿಳೆಯರು, ಮಕ್ಕಳು ಹಾಗೂ ವೃದ್ಧರೂ ಇದ್ದಾರೆ. ಗಾಯಗೊಂಡವರನ್ನು ವಿವಿಧ ಆಸ್ಪತ್ರೆಗಳಿಗೆ ಸ್ಥಳಾಂತರಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಭೂಕಂಪನದ ತೀವ್ರತೆಗೆ ಅನೇಕ ಕಟ್ಟಡಗಳು ಕುಸಿದಿದ್ದು, ಅವುಗಳ ಅವಶೇಷಗಳ ಅಡಿ ಅನೇಕ ಮಂದಿ ಸಿಲುಕಿಕೊಂಡಿರುವುದರಿಂದ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.