ಬೆಂಗಳೂರು: ಲೋಕಸಭಾ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಜೆಡಿಎಸ್‍ನಲ್ಲಿ ಭಾರೀ ಭಿನ್ನಮತ ಸ್ಫೋಟವಾಗಿದ್ದು, ಈ ಬಗ್ಗೆ ನಿಖಿಲ್ ಕುಮಾರಸ್ವಾಮಿ ಪಕ್ಷದ ಮುಖಂಡರ ಮನವೊಲಿಸಲು ಕಸರತ್ತು ನಡೆಸುತ್ತಿದ್ದಾರೆ.
ಈಗಾಗಲೇ ಮೈತ್ರಿಗೆ ಕೆಲ ಶಾಸಕರು ಹಾಗೂ ಮಾಜಿ ಶಾಸಕರು ವಿರೋಧ ವ್ಯಕ್ತಪಡಿಸಿದ್ದಾರೆ. ಅಸಮಾಧಾನ ಹೊರಹಾಕಿದ ಮುಖಂಡರ ಮನವೊಲಿಕೆಗೆ ನಿಖಿಲ್ ಕುಮಾರಸ್ವಾಮಿ ಅಖಾಡಕ್ಕಿಳಿದಿದ್ದಾರೆ. ಸಿಡಿದೆದ್ದ ನಾಯಕರ ಭೇಟಿ ಮಾಡಿ ಮಾತುಕತೆಗೆ ಮುಂದಾಗಿದ್ದಾರೆ. ಈಗಾಗಲೇ ಶಾಸಕ ಶರಣುಗೌಡ ಕಂದಕೂರು ಜೊತೆ ನಿಖಿಲ್ ಮಾತುಕತೆ ನಡೆಸಿದ್ದಾರೆ.
ಜೆಡಿಎಸ್ ಮುಖಂಡರು ಕಳೆದ ಚುನಾವಣೆಯಲ್ಲಿ ನಮ್ಮ ಕ್ಷೇತ್ರದಲ್ಲಿ ಬಿಜೆಪಿ ವಿರುದ್ಧ ಕೆಲಸ ಮಾಡಿದ್ದೆವು ಈಗ ಅವರ ಜೊತೆ ಹೊಂದಾಣಿಕೆ ಹೇಗೆ ಸಾಧ್ಯ? ಕ್ಷೇತ್ರದಲ್ಲಿ ಹೊಂದಾಣಿಕೆ ಆದರೆ ನಮ್ಮ ಕಾರ್ಯಕರ್ತರ ಕಥೆ ಏನು? ಬಿಜೆಪಿ ಅವಧಿಯಲ್ಲಿ ನಮ್ಮ ಕಾರ್ಯಕರ್ತರ ಮೇಲೆ ಕೇಸ್ ಹಾಕಿದ್ದಾರೆ. ಈಗ ಅವರ ಜೊತೆ ವೇದಿಕೆ ಹಂಚಿಕೊಳ್ಳುವುದು ಹೇಗೆ ಎಂಬ ಗಂಭೀರ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
ಕುಮಾರಸ್ವಾಮಿ ಮೈತ್ರಿ ಶಾಶ್ವತ ಎಂದು ಹೇಳಿದ್ದಾರೆ. ಹಾಗಾದರೆ ಮುಂದಿನ ಚುನಾವಣೆಯಲ್ಲಿ ನಮ್ಮ ಕ್ಷೇತ್ರಗಳ ಟಿಕೆಟ್ ಯಾರಿಗೆ ಸಿಗಲಿದೆ. ಮೈತ್ರಿಯಿಂದ ಸ್ಥಳೀಯ ಕಾರ್ಯಕರ್ತರ ಸ್ಥಾನಮಾನಗಳಿಗೆ ಹೇಗೆ ವ್ಯವಸ್ಥೆ ಮಾಡುತ್ತೀರಿ ಎನ್ನುವ ವಿಚಾರದ ಬಗ್ಗೆ ಕೆಲವು ಜೆಡಿಎಸ್ ಮುಖಂಡರು ಪ್ರಶ್ನೆ ಎತ್ತಿದ್ದಾರೆ. ಈ ಎಲ್ಲಾ ಗೊಂದಲಗಳನ್ನು ನಿಖಿಲ್ ಬಗೆಹರಿಸಿ ಪಕ್ಷದ ಮುಖಂಡರ ಮನವೊಲಿಸಲು ಮುಂದಾಗಿದ್ದಾರೆ.