ನವದೆಹಲಿ: ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನು ಭಾರತ ದೇಶವನ್ನು ಧಾರ್ಮಿಕ ನೆಲೆಗಟ್ಟಿನಲ್ಲಿ ಹಲವು ದೇಶಗಳನ್ನಾಗಿ ವಿಭಜಿಸುವ ಗುರಿ ಹೊಂದಿದ್ದ. ಅದು ಅವನ ಅಜೆಂಡಾ ಆಗಿತ್ತು ಅನ್ನೋ ಸ್ಫೋಟಕ ಮಾಹಿತಿ ಗುಪ್ತಚರ ಇಲಾಖೆಯ ಉನ್ನತ ಮೂಲಗಳಿಂದ ತಿಳಿದುಬಂದಿದೆ.
ಕಳೆದ ವಾರವಷ್ಟೇ ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನುಗೆ ಸೇರಿದ ಆಸ್ತಿಗಳನ್ನ NIA ತನ್ನ ವಶಕ್ಕೆ ತೆಗೆದುಕೊಂಡಿತ್ತು. ಪಂಜಾಬ್ ರಾಜ್ಯದ ಚಂಡೀಗಢ ಹಾಗೂ ಅಮೃತಸರದಲ್ಲಿ ಇದ್ದ ಗುರುಪತ್ವಂತ್ ಸಿಂಗ್ ಪನ್ನುಗೆ ಸೇರಿದ ಮನೆಗಳನ್ನ ವಶಕ್ಕೆ ಪಡೆಯಲಾಗಿತ್ತು.
ನಿಷೇಧಿತ ಸಿಖ್ಸ್ ಫಾರ್ ಜಸ್ಟೀಸ್ ಸಂಘಟನೆಯ ಮುಖ್ಯಸ್ಥನಾಗಿರುವ ಪನ್ನು, ಭಾರತ ದೇಶದ ಏಕತೆ ಹಾಗೂ ಸಮಗ್ರತೆಗೆ ಧಕ್ಕೆ ತರುವ ರೀತಿ ಹಾಗೂ ಸವಾಲೊಡ್ಡುವ ರೀತಿ ಆಡಿಯೋ ಸಂದೇಶಗಳನ್ನ ರವಾನಿಸುತ್ತಿದ್ದ. ಎಲ್ಲಕ್ಕಿಂತ ಹೆಚ್ಚಾಗಿ ಈತ ಪಂಜಾಬ್ ರಾಜ್ಯವನ್ನ ಖಲಿಸ್ತಾನ ದೇಶವನ್ನಾಗಿ ಮಾಡುವ ಉದ್ದೇಶ ಹೊಂದಿದ್ದ. ಅಷ್ಟು ಸಾಲದೇ ಕಾಶ್ಮೀರವನ್ನ ಪ್ರತ್ಯೇಕ ರಾಷ್ಟ್ರ ಆಗಬೇಕು, ಮುಸ್ಲಿಮರ ದೇಶ ಆಗಬೇಕು ಎಂದು ಬಯಸಿದ್ದ ಅನ್ನೋ ಮಾಹಿತಿ ಕೂಡ ಗುಪ್ತಚರ ಇಲಾಖೆ ಮೂಲಗಳಿಂದ ಬೆಳಕಿಗೆ ಬಂದಿದೆ.
ಹಾದಿ ತಪ್ಪಿದ ಯುವಕರನ್ನೇ ಗುರಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದ ಪನ್ನು, ತನ್ನ ಸಿಖ್ಸ್ ಫಾರ್ ಜಸ್ಟೀಸ್ ಸಂಘಟನೆ ಹೆಸರಲ್ಲಿ ಇಂಟರ್ನೆಟ್ ಮೂಲಕವೂ ದ್ವೇಷ ಹಾಗೂ ಮತಾಂದತೆ ಹರಡುವ ಕೆಲಸ ಮಾಡುತ್ತಿದ್ದ. ಯುವಕರು ಭಯೋತ್ಪಾದಕ ಕೃತ್ಯ ಎಸಗಲು ಪ್ರಚೋದಿಸುತ್ತಿದ್ದ. ಈ ಮೂಲಕ ಆತ ಪ್ರತ್ಯೇಕ ಖಲಿಸ್ತಾನ ದೇಶಕ್ಕಾಗಿ ಹೋರಾಟ ಮಾಡುವಂತೆ ಹುರಿದುಂಬಿಸುತ್ತಿದ್ದ. ಹೀಗಾಗಿ, 2019ರಲ್ಲೇ ಭಾರತ ಸರ್ಕಾರವು ಸಿಖ್ಸ್ ಫಾರ್ ಜಸ್ಟೀಸ್ ಸಂಘಟನೆಯನ್ನ ನಿಷೇಧ ಮಾಡಿತ್ತು.
ಜುಲೈ 2020ರಲ್ಲೇ ಭಾರತ ಸರ್ಕಾರದ ಗೃಹ ಇಲಾಖೆ ಗುರುಪತ್ವಂತ್ ಸಿಂಗ್ ಪನ್ನುನನ್ನು ಉಗ್ರಗಾಮಿ ಎಂದು ಹೆಸರಿಸಿತ್ತು. ಈತನ ಮಾಹಿತಿಯನ್ನು ಇಂಟರ್‌ಪೋಲ್‌ಗೂ ನೀಡಿತ್ತು. ರೆಡ್ ಕಾರ್ನರ್ ನೋಟಿಸ್ ಹೊರಡಿಸುವಂತೆ ಆಗ್ರಹಿಸಿತ್ತು. ಆದರೆ, ಭಾರತದ ಮನವಿಯನ್ನು ಇಂಟರ್‌ಪೋಲ್ ತಿರಸ್ಕರಿಸಿತ್ತು.