ಕೊಲೆ ಕೌತುಕದ ಕಥೆಯೊಂದಿಗೆ ನೋಡುಗರ ತಲೆಗೆ ಹುಳ ಬಿಡುವ ‘ತತ್ಸಮ ತದ್ಭವ’

By: Ommnews

Date:

Share post:

ನಟಿ ಮೇಘನಾ ರಾಜ್​ ಅವರು ಒಂದಷ್ಟು ವರ್ಷಗಳ ಹಿಂದೆ ಬ್ಯಾಕ್​ ಟು ಬ್ಯಾಕ್​ ಸಿನಿಮಾ ಮಾಡುತ್ತಿದ್ದರು. ಆದರೆ ಚಿರಂಜೀವಿ ಸರ್ಜಾ ನಿಧನದ ಬಳಿಕ ಅವರು ನಟನೆಯಿಂದ ಅಂತರ ಕಾಯ್ದುಕೊಂಡಿದ್ದರು. ಇತ್ತೀಚೆಗೆ ಎಲ್ಲ ನೋವನ್ನು ಪಕ್ಕಕ್ಕೆ ಇಟ್ಟು ಅವರು ಮತ್ತೆ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದು ಅವರ ಅಭಿಮಾನಿಗಳಿಗೆ ಖುಷಿ ನೀಡಿತ್ತು. ಮೇಘನಾ ರಾಜ್​ ಅವರು ‘ತತ್ಸಮ ತದ್ಭವ’ ಸಿನಿಮಾದ ಮೂಲಕ ಕಮ್​ಬ್ಯಾಕ್​ ಮಾಡಿದ್ದಾರೆ. ಸೈಕಲಾಜಿಕಲ್​ ಥ್ರಿಲ್ಲರ್​ ಶೈಲಿಯಲ್ಲಿ ಈ ಸಿನಿಮಾ ಮೂಡಿಬಂದಿದೆ. ಹೊಸ ನಿರ್ದೇಶಕ ವಿಶಾಲ್​ ಆತ್ರೇಯಾ ಅವರು ಪ್ರೇಕ್ಷಕರ ಕುತೂಹಲವನ್ನು ಹಿಡಿದಿಡುವಂತಹ ಪ್ರಯತ್ನ ಮಾಡಿದ್ದಾರೆ. ಮೇಘನಾ ರಾಜ್​ ಅವರ ಜೊತೆ ಪ್ರಜ್ವಲ್​ ದೇವರಾಜ್​ ಕೂಡ ಈ ಸಿನಿಮಾದಲ್ಲಿ ಒಂದು ಪ್ರಮುಖ ಪಾತ್ರ ಮಾಡಿದ್ದಾರೆ. ಮೇಘನಾ ರಾಜ್ ಅವರಿಗೆ ಒಂದು ರೀತಿಯಲ್ಲಿ ಈ ಸಿನಿಮಾ ಚಾಲೆಂಜಿಂಗ್​ ಆಗಿದೆ.

Advertisement
Advertisement
Advertisement

ಮರ್ಡರ್​ ಮಿಸ್ಟರಿ:

ತತ್ಸಮ ತದ್ಭಮ’ ಸಿನಿಮಾದಲ್ಲಿ ಒಂದು ಮರ್ಡರ್ ಮಿಸ್ಟರಿ ಕಥೆ ಇದೆ. ಗಂಡನನ್ನು ಕಳೆದುಕೊಂಡ ಕಥಾನಾಯಕಿ ಆರಿಕಾ (ಮೇಘನಾ ರಾಜ್​) ಪೊಲೀಸ್​ ಠಾಣೆಗೆ ಬಂದು ದೂರು ನೀಡುತ್ತಾಳೆ. ಅಲ್ಲಿ ಇರುವ ದಕ್ಷ ಪೊಲೀಸ್​ ಅಧಿಕಾರಿ ಅರವಿಂದ್​ಗೆ (ಪ್ರಜ್ವಲ್​) ಈ ಕೇಸ್​ ಬಹಳ ಸವಾಲಾಗಿ ಪರಿಣಮಿಸುತ್ತದೆ. ಪ್ರತಿ ಹಂತದಲ್ಲೂ ಅನುಮಾನ ಹೆಚ್ಚುತ್ತದೆ. ಆದರೆ ಅಪರಾಧಿ ಯಾರು ಎಂಬುದನ್ನು ಕಂಡುಹಿಡಿಯುವುದು ಅಷ್ಟು ಸುಲಭವಲ್ಲ. ಅದರ ನಡುವೆ ಹೊಸ ಪಾತ್ರಗಳು ಕೂಡ ಎಂಟ್ರಿ ಪಡೆದುಕೊಳ್ಳುತ್ತವೆ. ನಂತರ ಬರುವುದು ಅಸಲಿ ಟ್ವಿಸ್ಟ್​. ಹಾಗಾದರೆ ಕೊಲೆ ಮಾಡಿದವರು ಯಾರು? ಆ ಕೊಲೆಯ ಹಿಂದಿನ ಉದ್ದೇಶ ಏನು? ಕಥಾನಾಯಕಿ ಹೇಳಿದ್ದು ನಿಜವೋ ಸುಳ್ಳೋ ಎಂಬುದೆಲ್ಲ ತಿಳಿಯಬೇಕಾದರೆ ಪೂರ್ತಿ ಸಿನಿಮಾ ನೋಡಬೇಕು.

ಮೇಘನಾಗೆ ಮೆಚ್ಚುಗೆ:

ನಟಿ ಮೇಘನಾ ರಾಜ್​ ಅವರಿಗೆ ಈ ಸಿನಿಮಾದಲ್ಲಿ ಸವಾಲಿನ ಪಾತ್ರ ಇದೆ. ಎರಡು ಡಿಫರೆಂಟ್​ ಶೇಡ್​ ಇರುವ ಪಾತ್ರವನ್ನು ಅವರು ನಿಭಾಯಿಸಿದ್ದಾರೆ. ಇಡೀ ಸಿನಿಮಾದ ಕಥೆ ಅವರ ಸುತ್ತವೇ ಸುತ್ತುತ್ತದೆ. ಇದೊಂದು ನಾಯಕಿ ಪ್ರಧಾನ ಸಿನಿಮಾ ಆದ್ದರಿಂದ ಮೇಘನಾ ರಾಜ್​ ಅವರು ಹೆಚ್ಚು ಸ್ಕ್ರೀನ್​ ಸ್ಪೇಸ್​ ಪಡೆದುಕೊಂಡಿದ್ದಾರೆ. ಹಾಗಾಗಿ ಅವರ ಅಭಿಮಾನಿಗಳಿಗೆ ‘ತತ್ಸಮ ತದ್ಭವ’ ಸಿನಿಮಾ ಇಷ್ಟ ಆಗಲಿದೆ. ಮೇಘನಾ ರಾಜ್​ ಅವರ ಕಮ್​ಬ್ಯಾಕ್​ಗೆ ಸೂಕ್ತವಾದಂತಹ ಕಥೆ ಈ ಸಿನಿಮಾದಲ್ಲಿದೆ.

ಮೆರುಗು ತಂದ ಪ್ರಜ್ವಲ್​ ದೇವರಾಜ್​:

ನಟ ಪ್ರಜ್ವಲ್​ ದೇವರಾಜ್​ ಅವರದ್ದು ‘ತತ್ಸಮ ತದ್ಭವ’ ಸಿನಿಮಾದಲ್ಲಿ ಹೀರೋ ಪಾತ್ರ ಅಲ್ಲ. ಆದರೂ ಕೂಡ ಅವರು ಹೀರೋ ರೀತಿಯಲ್ಲೇ ಸಿನಿಮಾವನ್ನು ಆವರಿಸಿಕೊಂಡಿದ್ದಾರೆ. ಕಥೆಗೆ ಪ್ರಮುಖ ತಿರುವುಗಳನ್ನು ನೀಡುವ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಅವರಿಂದಾಗಿ ಈ ಚಿತ್ರದ ಮೆರುಗು ಹೆಚ್ಚಿದೆ. ಇನ್ನುಳಿದಂತೆ ಬಾಲಾಜಿ ಮನೋಹರ್​, ಅರವಿಂದ್​ ಅಯ್ಯರ್​, ಗಿರಿಜಾ ಲೋಕೇಶ್​, ಶ್ರುತಿ, ಟಿ.ಎಸ್​. ನಾಗಾಭರಣ, ರಾಜಶ್ರೀ ಪೊನ್ನಪ್ಪ ಅವರ ಪಾತ್ರಗಳು ಕೆಲವೇ ದೃಶ್ಯಗಳಲ್ಲಿ ಕಾಣಿಸಿಕೊಂಡರೂ ಕೂಡ ಪರಿಣಾಮಕಾರಿ ಆಗಿವೆ.

ಪ್ರೇಕ್ಷಕರ ತಲೆಗೆ ಕೆಲಸ:

ಬೇರೆ ಸಿನಿಮಾಗಳಂತೆ ಗಮನ ಎತ್ತಲೋ ಇಟ್ಟುಕೊಂಡು ‘ತತ್ಸಮ ತದ್ಭವ’ ಚಿತ್ರವನ್ನು ನೋಡಲು ಸಾಧ್ಯವಿಲ್ಲ. ಯಾಕೆಂದರೆ, ಈ ಸಿನಿಮಾದ ಕಥೆಯು ಪ್ರೇಕ್ಷಕರ ತಲೆಗೆ ಕೆಲಸ ಕೊಡುತ್ತದೆ. ಎಲ್ಲ ದೃಶ್ಯಗಳನ್ನು ಬಹಳ ಗಮನವಹಿಸಿ ನೋಡಿದರೆ ಮಾತ್ರ ಅಸಲಿ ಕಹಾನಿ ಏನು ಎಂಬುದು ಅರ್ಥವಾಗುತ್ತದೆ. ಅತ್ತಿತ್ತ ನೋಡಿದರೆ ಲಿಂಕ್​ ಮಿಸ್​ ಆಗುವ ಸಾಧ್ಯತೆ ಜಾಸ್ತಿ ಇರುತ್ತದೆ. ಈ ಪ್ರಕಾರದ ಸಿನಿಮಾಗಳನ್ನು ಬಯಸುವ ಪ್ರೇಕ್ಷಕರಿಗೆ ‘ತತ್ಸಮ ತದ್ಭವ’ ಹಿಡಿಸುತ್ತದೆ. ಗಮನ ಬೇರೆಡೆಗೆ ಇಟ್ಟುಕೊಂಡು ಅರೆಬರೆ ಸಿನಿಮಾ ನೋಡಿದರೆ ರುಚಿಸದೇ ಇರಬಹುದು. ಬೇರೆ ಬೇರೆ ಕಾಲಘಟ್ಟದಲ್ಲಿ ಕಥೆಯನ್ನು ಹೇಳುವ ಕೆಲವು ದೃಶ್ಯಗಳಲ್ಲಿ ಈ ಸಿನಿಮಾ ಗೊಂದಲ ಮೂಡಿಸುತ್ತದೆ. ಎರಡನೇ ಬಾರಿ ನೋಡಿದರೆ ಮಾತ್ರ ಗ್ರಹಿಕೆಗೆ ಸಿಗುವಂತಹ ನಿರೂಪಣೆ ಈ ಚಿತ್ರದಲ್ಲಿದೆ.

ಚುರುಕಾಗಿ, ಚುಟುಕಾಗಿ

‘ತತ್ಸಮ ತದ್ಭವ’ ಸಿನಿಮಾದ ಅವಧಿ ಕೇವಲ 2 ಗಂಟೆ 2 ನಿಮಿಷ ಮಾತ್ರ ಇದೆ. ಅಷ್ಟರೊಳಗೆ ಹೇಳಬೇಕಾದ ಕಥೆಯನ್ನು ಬಹಳ ಚುರುಕಾಗಿ, ಚುಟುಕಾಗಿ ಹೇಳಿ ಮುಗಿಸಲಾಗಿದೆ. ಹಾಗಾಗಿ ಈ ಸಿನಿಮಾ ಎಲ್ಲಿಯೂ ಬೋರು ಹೊಡೆಯುವುದಿಲ್ಲ. ಆರಂಭದಲ್ಲಿ ಕಥೆ ತೆರೆದುಕೊಳ್ಳಲು ಸ್ವಲ್ಪ ಸಮಯ ಹಿಡಿಯುತ್ತದೆ. ಇಂಟರ್​ವಲ್​ ಬಳಿಕ ಚಿತ್ರದ ವೇಗ ಹೆಚ್ಚುತ್ತದೆ. ಸಂಗೀತ ನಿರ್ದೇಶಕ ವಾಸುಕಿ ವೈಭವ್​ ಅವರು ಹಿನ್ನೆಲೆ ಸಂಗೀತದಲ್ಲಿ ಹಾಗೂ ‘ದೂರಿ ಲಾಲಿ..’ ಹಾಡಿನಲ್ಲಿ ಇಷ್ಟವಾಗುತ್ತಾರೆ.

ಚಿತ್ರ:ಅನ್ವಿತ್​ ಸಿನಿಮಾಸ್​.

ನಿರ್ದೇಶನ: ವಿಶಾಲ್​ ಆತ್ರೇಯ.

ಪಾತ್ರವರ್ಗ: ಮೇಘನಾ ರಾಜ್​, ಪ್ರಜ್ವಲ್​ ದೇವರಾಜ್​, ಅರವಿಂದ್​​ ಅಯ್ಯರ್​, ಮಹತಿ ವೈಷ್ಣವಿ ಭಟ್​, ಶ್ರುತಿ, ಟಿಎಸ್​ ನಾಗಾಭರಣ, ಗಿರಿಜಾ ಲೋಕೇಶ್​, ರಾಜಶ್ರೀ ಪೊನ್ನಪ್ಪ ಮುಂತಾದವರು.

ಸ್ಟಾರ್​: 3/5

Share post:

LEAVE A REPLY

Please enter your comment!
Please enter your name here

ದೇಣಿಗೆ

Add an Introductory Description to make your audience curious by simply setting an Excerpt on this section