ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್ಆ್ಯಪ್ ಪ್ರತಿದಿನ ಒಂದಲ್ಲ ಒಂದು ವಿಚಾರದಲ್ಲಿ ಸುದ್ದಿಯಾಗುತ್ತಲೇ ಇರುತ್ತದೆ. ಮೊನ್ನೆಯಷ್ಟೆ ಭಾರತದಲ್ಲಿ ಕಿರುಕುಳ, ನಕಲಿ ಮಾಹಿತಿಯನ್ನು ಫಾರ್ವರ್ಡ್ ಮಾಡುವುದು, ಇತರ ಬಳಕೆದಾರರನ್ನು ವಂಚಿಸಿದಂತಹ 72 ಲಕ್ಷಕ್ಕೂ ಅಧಿಕ ಖಾತೆಯನ್ನು ನಿಷೇಧಿಸಿ ಸುದ್ದಿಯಾಗಿತ್ತು. ಇದರ ನಡುವೆ ಹೊಸ ಹೊಸ ಫೀಚರ್ಗಳನ್ನು ಕೂಡ ಘೋಷಣೆ ಮಾಡುತ್ತಿದೆ.
ವಾಟ್ಸ್ಆ್ಯಪ್ನಲ್ಲಿ ಸಾಲು ಸಾಲು ಅಪ್ಡೇಟ್ಗಳು ಬರಲು ತಯಾರಾಗಿದೆ. ಹೀಗಿರುವಾಗ ಇಂದು ಮತ್ತೊಂದು ನೂತನ ಆಯ್ಕೆಯ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಸದ್ಯದಲ್ಲೇ ವಾಟ್ಸ್ಆ್ಯಪ್ನಲ್ಲಿ ಫಿಲ್ಟರ್ ಆಯ್ಕೆ ಬರಲಿದ್ದು, ಇದು ಚಾಟ್ ಲಿಸ್ಟ್ನಲ್ಲಿ ಮಹತ್ವದ ಬದಲಾವಣೆ ತರಲಿದೆ.
ವಾಟ್ಸ್ಆ್ಯಪ್ ಅಪ್‌ಡೇಟ್‌ಗಳ ಟ್ರ್ಯಾಕರ್, WabetaInfo ನ ವರದಿಯ ಪ್ರಕಾರ, ಮೆಟಾ-ಮಾಲೀಕತ್ವದ ಇನ್‌ಸ್ಟಂಟ್ ಮೆಸೇಜಿಂಗ್ ಅಪ್ಲಿಕೇಶನ್ ಬಳಕೆದಾರರಿಗೆ ಚಾಟ್ ಪಟ್ಟಿಯನ್ನು ಫಿಲ್ಟರ್ ಎಂಬ ಹೊಸ ವೈಶಿಷ್ಟ್ಯವನ್ನು ನೀಡಲು ಮುಂದಾಗಿದೆ. ಸದ್ಯ ಈ ಫೀಚರ್ ಅಭಿವೃದ್ದಿ ಹಂತದಲ್ಲಿದೆ ಎಂದು ಹೇಳಿದೆ.
ವಾಟ್ಸ್ಆ್ಯಪ್ ಬೀಟಾ 2.23.14.17 ಅಪ್ಡೇಟ್ನಲ್ಲಿ ಇದು ಕಂಡುಬಂದಿದೆ. ಈ ಹೊಸ ಟೂಲ್ ಬಗ್ಗೆ ಸ್ಕ್ರೀನ್ ಶಾಟ್ ಕೂಡ ಹರಿದಾಡುತ್ತಿದೆ. ಈ ಆಯ್ಕೆಯ ಮೂಲಕ ಚಾಟ್ ಲಿಸ್ಟ್ ಅನ್ನು ಸುಲಭವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ.
ಮಾಹಿತಿಯ ಪ್ರಕಾರ, ಫಿಲ್ಟರ್ನಲ್ಲಿ ಮೂರು ಆಯ್ಕೆಗಳು ಇರಲಿದೆ. ಅನ್ರೀಡ್ ಮೆಸೇಜೆಸ್, ವೈಯಕ್ತಿಕ ಸಂಭಾಷಣೆಗಳು ಮತ್ತು ವ್ಯವಹಾರ ಸಂಭಾಷಣೆಗಳು ಹೀಗೆ ಮೂರು ಆಯ್ಕೆಗಳು ಇರಲಿದೆ. ವಾಟ್ಸ್ಆ್ಯಪ್ ಮೇಲ್ಬಾಗದ ಬಲ ಮೂಲೆಯಲ್ಲಿ ಈ ಫಿಲ್ಟನ್ ಬಟನ್ ಇರಲಿದೆ ಎಂದು ಹೇಳಲಾಗಿದೆ.
ಈ ವೈಶಿಷ್ಟ್ಯದ ಮೂಲಕ ಬಳಕೆದಾರರು ಸೆಕೆಂಡುಗಳಲ್ಲಿ ಪ್ರಮುಖ ಚಾಟ್‌ಗಳನ್ನು ಪ್ರವೇಶಿಸಬಹುದು. ಆದರೆ, ಗ್ರೂಪ್ ಚಾಟ್ಗಳಿಗೆ ಇದು ಅನ್ವಯ ಆಗುವುದಿಲ್ಲ. ಇದಕ್ಕಾಗಿ ಯಾವುದೇ ಆಯ್ಕೆ ಕಂಡುಬಂದಿಲ್ಲ.