
ಬೆಂಗಳೂರು: ತಮಿಳುನಾಡಿಗೆ ಮತ್ತೆ ಐದು ಸಾವಿರ ಕ್ಯೂಸೆಕ್ಸ್ ನೀರನ್ನು ಬಿಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಇಂದು ಸೆ.13 ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ತುರ್ತು ಸಭೆ ನಡೆಯಲಿದೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ 12:30 ಕ್ಕೆ ವಿಶೇಷ ಸಭೆ ಕರೆಯಲಾಗಿದೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ , ಮತ್ತು ಕಾವೇರಿ ಜಲಾನಯನ ಪ್ರದೇಶದ ವ್ಯಾಪ್ತಿಯ ಸಚಿವರುಗಳು, ಎಲ್ಲ ಪಕ್ಷಗಳ ಮಾಜಿ ಮುಖ್ಯಮಂತ್ರಿಗಳು, ರಾಜ್ಯ ಸಚಿವ ಸಂಪುಟದ ಹಿರಿಯ ಸಚಿವರು, ಲೋಕಸಭೆ ಮತ್ತು ರಾಜ್ಯ ಸಭಾ ಸದಸ್ಯರುಗಳು ತುರ್ತು ಸಭೆಯಲ್ಲಿ ಭಾವಹಿಸಲಿದ್ದಾರೆ.
ಕರ್ನಾಟಕದಲ್ಲಿ ಕಾವೇರಿ ಕಿಚ್ಚು ಹೆಚ್ಚಿದೆ. ಕಾವೇರಿ ನೀರು ನಿಯಂತ್ರಣ ಸಮಿತಿ ತಮಿಳುನಾಡಿಗೆ ಮತ್ತೆ 15 ದಿವಸ 5000 ಕ್ಯೂಸೆಕ್ ನೀರು ಬಿಡಬೇಕೆಂದು ಮಂಗಳವಾರ ರಾಜ್ಯಕ್ಕೆ ಆದೇಶಿಸಿದೆ. ಇದರಿಂದ ಕಾವೇರಿ ತೀರದ ರೈತರಿಗೆ ಬರಸಿಡಲು ಬಡಿದಂತಾಗಿದೆ. ಈ ಹಿನ್ನೆಲೆಯಲ್ಲಿ ರೈತರು ಸರ್ಕಾರದ ವಿರುದ್ಧ ಇನ್ನಷ್ಟು ಆಕ್ರೋಶಗೊಂಡಿದ್ದು, ರಸ್ತೆಗೆ ಇಳಿದು ಪ್ರತಿಭಟನೆ ಮಾಡುತ್ತಿದ್ದಾರೆ. ಮತ್ತೊಂದೆಡೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ವರುಣನ ಕೃಪೆ ಇಲ್ಲದೇ ಭೂಮಿ ಬರಡಾಗುತ್ತಿದೆ. ಬರಗಾಲ ಆವರಿಸಿದ್ದು, ಪ್ರತಿಪಕ್ಷಗಳು ಬರಗಾಲ ಪೀಡಿತ ತಾಲೂಕುಗಳ ಹೆಸರು ಘೋಷಣೆ ಮಾಡುವಂತೆ ಪಟ್ಟು ಹಿಡಿದಿವೆ. ಇನ್ನ ಸಚಿವ ಡಿ. ಸುಧಾಕರ್ ವಿರುದ್ಧ ಭೂಕಬಳಿಕೆ, ಜಾತಿ ನಿಂದನೆ ಆರೋಪದ ಅಡಿ ಪ್ರಕರಣ ದಾಖಲಾಗಿದ್ದು, ಕೂಡಲೆ ಸಚಿವರನ್ನು ಸಂಪುಟದಿಂದ ಕೈಬಿಡುವಂತೆ ಪ್ರತಿಪಕ್ಷಗಳು ಆಗ್ರಹಿಸಿವೆ.